ವಯನಾಡು ಭೂಕುಸಿತ ದುರಂತ : 2 ಕೋಟಿ ನೀಡಿದ ಪ್ರಭಾಸ್

ತಮ್ಮ ಇತ್ತೀಚಿನ ”ಕಲ್ಕಿ 2898 ಎಡಿ” ಸಿನಿಮಾ ಯಶಸ್ಸಿನಲ್ಲಿರುವ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಅವರೀಗ ತಮ್ಮ ಮಾನವೀಯ ಕಾರ್ಯಗಳಿಂದ ಸಖತ್​​​ ಸುದ್ದಿಯಲ್ಲಿದ್ದಾರೆ. ಭಯಾನಕ ಭೂಕುಸಿತಕ್ಕೆ ಕೇರಳದ ವಯನಾಡು ತತ್ತರಿಸಿದ್ದು, ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟ ದೊಡ್ಡ ಮಟ್ಟದಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ವಿನಾಶಕಾರಿ ಭೂಕುಸಿತದ ಸಂತ್ರಸ್ತರ ನೆರವಿಗೆ ಬಂದಿರುವ ನಟ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ರೂ. ಡೊನೇಟ್​​​ ಮಾಡಿದ್ದಾರೆ. ನಟನ ಈ ದೇಣಿಗೆ ಭೂಕುಸಿತ ಪೀಡಿತ ಕುಟುಂಬಗಳಿಗೆ ನೆರವಾಗಲು ಮತ್ತು ಚೇತರಿಕೆಯ ಕೆಲಸಗಳನ್ನು ಬೆಂಬಲಿಸಲು ಸಹಾಯವಾಗುತ್ತದೆ.

ನಟ ಪ್ರಭಾಸ್ ಮಾತ್ರವಲ್ಲದೇ ಟಾಲಿವುಡ್ ಸೇರಿದಂತೆ ಸೌತ್​ ಸಿನಿಮಾ ಸೆಲೆಬ್ರಿಟಿಗಳು ಕೇರಳ ವಿಚಾರದಲ್ಲಿ ತಮ್ಮ ಉದಾರತೆ ಮೆರೆದಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ 25 ಲಕ್ಷ ರೂ., ಮೆಗಾಸ್ಟಾರ್​​ ಚಿರಂಜೀವಿ ಮತ್ತು ಪುತ್ರ ರಾಮ್ ಚರಣ್ 1 ಕೋಟಿ ರೂಪಾಯಿ ನೀಡಿದ್ದಾರೆ. ಜೊತೆಗೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿಯೂ ತಮ್ಮ ದೇಣಿಗೆ ನೀಡಿದ್ದಾರೆ.

ಕೇರಳದಲ್ಲಿಯೂ ಜನರ ಪ್ರೀತಿ ಸಂಪಾದಿಸಿರುವ ಬಹುಭಾಷಾ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ ಅವರೂ ಕೂಡಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೀಡಿದ್ದಾರೆ. ಇತ್ತೀಷೆಗಷ್ಟೇ ಈವೆಂಟ್‌ಗಾಗಿ ಕೇರಳಕ್ಕೆ ತೆರಳಿದ್ದ ರಶ್ಮಿಕಾ, ಅಲ್ಲಿನ ಜನರ ಬಗ್ಗೆ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದರು. ಇದೀಗ ವಯನಾಡು ದುರಂತದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡುತ್ತಿರುವ ದಕ್ಷಿಣ ಚಿತ್ರರಂಗದ ಖ್ಯಾತನಾಮರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.

Leave a Reply

Your email address will not be published. Required fields are marked *