ಬರಹ : ಡಾ. ನಟರಾಜ್ ಹುಳಿಯಾರ್, ಲೇಖಕ, ಕಥೆಗಾರ
ಸಾಕ್ರೆಟಿಸ್ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ. ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ 2400 ವರ್ಷಗಳ ಕೆಳಗೆ ಬದುಕಿದ್ದ ದಿಟ್ಟ, ಸ್ವತಂತ್ರ ಗ್ರೀಕ್ ಫಿಲಾಸಫರ್. ಸಾಕ್ರೆಟಿಸ್ ತರುಣ ಜನಾಂಗವನ್ನು ಸ್ವತಂತ್ರವಾಗಿ ಯೋಚಿಸುವಂತೆ ಪ್ರೇರೇಪಿಸುತ್ತಿದ್ದ. ನಮ್ಮನ್ನು ನಾವು ಪರೀಕ್ಷೆಗೆ ಒಡ್ಡಿಕೊಳ್ಳದ ಜೀವನ ಬದುಕಲು ಲಾಯಕ್ಕಲ್ಲ ಎಂದು ಹೇಳುತ್ತಿದ್ದ. ಸಾಕ್ರೆಟಿಸ್ ಹೊಸ ತಲೆಮಾರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾನೆಂದು ಹಳೆಯ ತಲೆಮಾರಿನವರು ಸಿಟ್ಟಾಗಿದ್ದರು.
ಸಾಕ್ರೆಟಿಸ್ ಬಗ್ಗೆ ಹಳಬರ ಪೂರ್ವಗ್ರಹಗಳು ಗ್ರೀಕ್ ವಿನೋದ ನಾಟಕಕಾರ ಅರಿಸ್ಟೋಫನಿಸ್ನ ನಾಟಕಗಳಲ್ಲೂ ಸೇರಿಕೊಂಡವು. ಅರಿಸ್ಟೋಫನಿಸ್ (446 ಬಿ.ಸಿ.- 386 ಬಿ.ಸಿ.) ಮಹಾ ಪ್ರತಿಭಾವಂತ ನಾಟಕಕಾರ. ಕಾಮಿಡಿ ನಾಟಕ ಪ್ರಕಾರದ ಪಿತಾಮಹ. ತನ್ನ ಕಾಲದ ರಾಜನನ್ನೇ ಗೇಲಿ ಮಾಡುತ್ತಿದ್ದ; ರಾಜನ ಬಗ್ಗೆ ಪ್ರಜೆಗಳ ಮನಸ್ಸಿನಲ್ಲಿದ್ದ ಅಸಮಾಧಾನ, ಸಿಟ್ಟು, ಭಿನ್ನಮತಗಳಿಗೆ ದನಿಯಾಗಿದ್ದ. ಡಯೋನಿಸಿಸ್ ಎಂಬ ಕಾಳಶಕ್ತಿಗಳ ದೇವತೆಯನ್ನು ಕೂಡ ಗೇಲಿ ಮಾಡುತ್ತಿದ್ದ.
ಹೀಗೆ ಅರಿಸ್ಟೋಫನಿಸ್ ಜನರನ್ನು ಆಳುವ ರಾಜ, ದೇವತೆ ಎಂಬ ಎರಡೂ ಬಗೆಯ ಸರ್ವಾಧಿಕಾರಗಳನ್ನು ನೋಡಿ ಜನ ನಗುವಂತೆ ಮಾಡುತ್ತಿದ್ದ; ಆ ಮೂಲಕ ನಾಟಕದ ನೋಡುಗರು ನಿರ್ಭಯ ಮನಸ್ಸಿನ ವ್ಯಕ್ತಿಗಳಾಗುವಂತೆ ಮಾಡುತ್ತಿದ್ದ. ಆ ಮೂಲಕ ತನ್ನ ಕಾಲದ ಜನಾಭಿಪ್ರಾಯವನ್ನು ರೂಪಿಸುತ್ತಿದ್ದ. ಡಾ.ನಟರಾಜ್ ಹುಳಿಯಾರ್ ಲೇಖಕ, ಕಥೆಗಾರ
ಆದರೆ ಅದೇ ಕಾಲದಲ್ಲಿ ಅಥೆನ್ಸಿಗೆ ಹೊಸ ಚಿಂತನೆಗಳನ್ನು ತಂದ ಹೊರಗಿನವರ ಬಗೆಗೆ, ಇತರ ದೇಶಗಳ ಚಿಂತಕರ ಬಗೆಗೆ, ವಿದೇಶೀಯರ ಬಗ್ಗೆ ಅರಿಸ್ಟೋಫನಿಸ್ ಪೂರ್ವಗ್ರಹ ಬೆಳೆಸಿಕೊಂಡ. ಆ ಕಾಲದಲ್ಲಿ ಗ್ರೀಸ್ ದೇಶದ ಅಥೆನ್ಸ್ ಹೊಸ ಚಿಂತನೆಗಳ ಚರ್ಚೆಯ ನೆಲೆವೀಡಾಗಿತ್ತು. ಅಥೆನ್ಸಿಗೆ ಹೊಸ ಡಯಲೆಕ್ಟಿಕಲ್ ಚಿಂತನೆಯ ಸೋಫಿಸ್ಟರೂ ಬಂದರು. ಅವರು ಕೂಡ ಹಾಲಿಯಿದ್ದ ರೂಢಿ ಮಾರ್ಗಗಳನ್ನು ಪ್ರಶ್ನಿಸುವವರೇ ಆಗಿದ್ದರು.
ಅಥೆನ್ಸಿನ ಹಳಬರಿಗೆ ಅದು ಹೇಗೋ ಏನೋ ತಮ್ಮ ಅಥೆನ್ಸಿನಲ್ಲಿರುವ ತತ್ವಜ್ಞಾನಿ ಸಾಕ್ರೆಟಿಸ್ ಈ ಸೋಫಿಸ್ಟ್ ಮಾರ್ಗದ ಚಿಂತಕರ ಪರವಾಗಿದ್ದಾನೆ ಎಂಬ ಪೂರ್ವಗ್ರಹ ಬೆಳೆಯಿತು. ಅಥವಾ ಅದು ಅರಿಸ್ಟೋಫನಿಸ್ ಎಂಬ ನಾಟಕಕಾರನ ಮನಸ್ಸಿನಲ್ಲಿ ಹೆಚ್ಚು ಬೆಳೆಯಿತೋ ಏನೋ! ಹೇಳುವುದು ಕಷ್ಟ. ತನ್ನ ಕಾಲದ ಕ್ರಾಂತಿಕಾರಿ ತತ್ವಜ್ಞಾನಿ ಸಾಕ್ರೆಟಿಸ್ ಬಗ್ಗೆ ತನ್ನ ಪೂರ್ವಗ್ರಹ ಹಾಗೂ ಆ ಕಾಲದ ಪೂರ್ವಗ್ರಹ ಎರಡೂ ಅರಿಸ್ಟೋಫನಿಸನಲ್ಲಿ ಸೇರಿಕೊಂಡಂತಿವೆ. ಅರಿಸ್ಟೋಫನಿಸ್ ತನ್ನ ದ ಕ್ಲೌಡ್ಸ್ ನಾಟಕದಲ್ಲಿ ಸಾಕ್ರಟಿಸ್ ನನ್ನು ಪಾತ್ರವಾಗಿ ಮಾಡಿ ಕ್ರೂರವಾಗಿ ಅಣಕಿಸಿದ. ಆ ಕಾಲದ ಅಥೆನ್ಸ್ನಲ್ಲಿ ಪ್ರತಿ ವರ್ಷ ನಾಟಕ ಸ್ಪರ್ಧೆಗಳು ನಡೆಯುತ್ತಿದ್ದವು. ಅಲ್ಲಿ ಗೆಲ್ಲಲು ನಾಟಕಕಾರರು ಸಣ್ಣ ಪುಟ್ಟ ಟ್ರಿಕ್ಗಳನ್ನು ಕೂಡ ಮಾಡುತ್ತಿದ್ದಂತೆ ಕಾಣುತ್ತದೆ!
ಆದರೆ ಅರಿಸ್ಟೋಫನಿಸ್ ನಾಟಕದ ಬರ್ಬರ ಅಣಕ ಬಲೂನುಗಳಾದ ಈ ಕಾಲದ ನಾಯಕರಿಗೆ ಎಲ್ಲಿಂದ ಬಂದೀತು! ಅರವತ್ತು ಗಾಳಿ-ಬೆಳಕು ಹಳಬರ ಮನಸ್ಸಿನಲ್ಲಿ ಸಾಕ್ರೆಟಿಸ್ನ ಸ್ವತಂತ್ರ ಮನೋಭಾವದ ಬಗ್ಗೆ, ವೈಚಾರಿಕತೆಯ ಬಗ್ಗೆ ಇದ್ದ ವಿಷವನ್ನು ಮತ್ತಷ್ಟು ಹೆಚ್ಚಿಸಿತು. ಕೊನೆಗೆ ಅಥೆನ್ಸಿನ ನ್ಯಾಯಮಂಡಲಿ ಸಾಕ್ರೆಟಿಸ್ಗೆ ವಿಷ ಕುಡಿಸುವ ಶಿಕ್ಷೆ ಕೊಟ್ಟಿದ್ದರಲ್ಲಿ ಅರಿಸ್ಟೋಫನಿಸ್ ನಾಟಕದ ಕ್ರೂರ ಪ್ರಭಾವವೂ ಇತ್ತು ಎಂದು ಪ್ಲೇಟೋ ಟೀಕಿಸುತ್ತಾನೆ.
ಹೆಮ್ಲಾಕ್ ಎಂಬ ವಿಷ ಕುಡಿಸುವ ಆþೆ ಮಾಡುವ ಮುನ್ನ ನ್ಯಾಯಮಂಡಲಿ ಸಾಕ್ರಟಿಸ್ನನ್ನು ನೀನು ಹೇಳಿರುವುದು ತಪ್ಪು ಎಂದು ಒಪ್ಪಿಕೊಂಡರೆ ನಿನ್ನ ಶಿಕ್ಷೆ ರದ್ದು ಮಾಡುತ್ತೇವೆ ಎಂದು ಹೇಳಿತು. ಆಗ ಸಾಕ್ರೆಟಿಸ್ ಹೇಳಿದ: ನೀವು ನನ್ನನ್ನು ಬಿಡುಗಡೆ ಮಾಡಿದರೂ, ಬಿಡುಗಡೆ ಮಾಡದಿದ್ದರೂ ನಾನು ಹೇಳಿದ್ದು ಸರಿ ಎಂದೇ ಹೇಳುತ್ತೇನೆ. ಇಂಥ ದಿಟ್ಟ ತತ್ವಜ್ಞಾನಿ ಸಾಕ್ರೆಟಿಸ್ ಬಗ್ಗೆ ಅರಿಸ್ಟೋಫನಿಸ್ ಥರದವರಿಗೆ ಇದ್ದ ಪೂರ್ವಗ್ರಹ ಈ ಕಾಲದ ಕಾಮಿಡಿಗಳಲ್ಲೂ ಇರಬಲ್ಲದು. ಆದ್ದರಿಂದಲೇ ಕಾಮಿಡಿ ನೋಡಿ ನಗುವ ಮುನ್ನ ಅಥವಾ ನಕ್ಕ ನಂತರ, ನಗಿಸುವವರ ಉದ್ದೇಶ ಏನೆಂಬುದನ್ನು ಕಾಣುವ ವೈಚಾರಿಕ ನೋಟ ಮಗಿರಬೇಕಾಗುತ್ತದೆ. ಒಂದು ಕಾಲಕ್ಕೆ ಜನಪ್ರಿಯ ಎನ್ನಿಸಿಕೊಂಡಿದ್ದ ಮಾಸ್ಟರ್ ಹಿರಣ್ಣಯ್ಯ ಥರದವರ ಅಗ್ಗದ ಕಾಮಿಡಿಗಳು ನೇರವಾಗಿಯೇ ಶೂದ್ರವಿರೋಧಿಗಳಾಗಿದ್ದವೆಂಬುದು ನಿಮಗೆ ನೆನಪಿರಬಹುದು. ಆದ್ದರಿಂದಲೇ ಜನರನ್ನು ನಗಿಸುವ ಮುಸುಕಿನ ಮರೆಯಲ್ಲಿ ಕಾಮಿಡಿಗಳು ಮಾಡುವ ಕ್ರೂರ, ಚಿಲ್ಲರೆ ರಾಜಕಾರಣವನ್ನು ಜಾಣ ಜಾಣೆಯರು ವಿಮರ್ಶಾತ್ಮಕವಾಗಿ ಗಮನಿಸುತ್ತಿರಬೇಕಾಗುತ್ತದೆ.
ತನ್ನ ಬಗೆಗಿನ ಅಣಕವಿದ್ದ ನಾಟಕದ ಪ್ರದರ್ಶನ ನಡೆಯುತ್ತಿದ್ದಾಗ ಸಾಕ್ರೆಟಿಸ್ ಹೇಗೆ ಪ್ರತಿಕ್ರಿಯಿಸಿದ ಎ.ಎನ್. ಮೂರ್ತಿರಾವ್ ಅನುವಾದಿಸಿರುವ ಸಾಕ್ರೆಟಿಸನ ಕೊನೆಯ ದಿನಗಳು ಪುಸ್ತಕದಲ್ಲಿ ಒಂದು ಭಾಗವಿದೆ: ಒಮ್ಮೆ ಅಥೆನ್ಸಿನ ಬಯಲು ರಂಗಭೂಮಿಯಲ್ಲಿ ದ ಕ್ಲೌಡ್ಸ್ ನಾಟಕ ನಡೆಯುತ್ತಿತ್ತು. ಸಾಕ್ರೆಟಿಸ್ ಪಾತ್ರ ರಂಗದ ಮೇಲೆ ಬಂತು. ಈ ನಾಟಕ ತನ್ನನ್ನು ಗೇಲಿ ಮಾಡಿ, ಜನರ ದ್ವೇಷಕ್ಕೂ ತಿರಸ್ಕಾರಕ್ಕೂ ಗುರಿ ಮಾಡಿದ್ದನ್ನು ಸಾಕ್ರೆಟಿಸ್ ಖುದ್ದು ನೋಡಿದ. ಸಾಕ್ರೆಟಿಸ್ಗೆ ಎಷ್ಟು ಆತ್ಮವಿಶ್ವಾಸ ಇತ್ತೆಂದರೆ, ಅವನು ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಈ ನಾಟಕದಲ್ಲಿ ಗೇಲಿಗೊಳಗಾಗುತ್ತಿರುವವನು ನಾನೇ ಎಂಬುದು ಎಲ್ಲರಿಗೂ ಕಾಣುವಂತೆ ಎದ್ದು ನಿಂತುಕೊಂಡ! ಸಾಕ್ರೆಟಿಸ್ಗೆ ಸಾವಿರಾರು ವರ್ಷಗಳ ಕೆಳಗೆ ಇದ್ದ ಆತ್ಮವಿಶ್ವಾಸ, ಹಾಸ್ಯಪ್ರþೆ ಹುಂಬ ಜನರ ಹುಸಿ ಭಜನೆಯ ಪರಾಕು ಪಂಪುಗಳಿಂದ ಉಬ್ಬುವ ವರ್ಷಗಳ ಕೆಳಗೆ, ತಮ್ಮನ್ನು ಗೇಲಿ ಮಾಡಿ ಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್ ಬರೆದ ಕಾರ್ಟೂನನ್ನು ನೆಹರು ತಮ್ಮ ಕಛೇರಿಯ ಗೋಡೆಯ ಮೇಲೆ ತೂಗು ಹಾಕಿಕೊಂಡಿದ್ದರು. ಆದರೆ ಅವರ ಪುತ್ರಿ ಇಂದಿರಾಗಾಂಧಿಯವರನ್ನು ಗೇಲಿ ಮಾಡಿದ್ದ ನಾಟಕವೊಂದು ನಡೆಯಲು ಇಂದಿರಾ ಭಕ್ತರು ಬಿಡಲಿಲ್ಲ!
ಈ ಕಾಲದ ಸರ್ಕಾರಗಳಂತೂ ಸ್ಟ್ಯಾಂಡಪ್ ಕಾಮಿಡಿ ಮಾಡುವ ಹುಡುಗ, ಹುಡುಗಿಯರಿಗೆ ನಿತ್ಯ ಕಿರಿಕಿರಿ ಮಾಡುತ್ತಲೇ ಇರುತ್ತವೆ; ನಿತ್ಯವೂ ಈ ಕಿರುಕುಳಜೀವಿ ಗುಂಪುಗಳ ಉಪಟಳ ನಡೆಯುತ್ತಲೇ ಇರುತ್ತದೆ. ಮೊನ್ನೆ ಶ್ಯಾಮ್ ರಂಗೀಲ ಎಂಬ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಹಾಲಿ ಪ್ರೈಂ ಮಿನಿಸ್ಟರ್ ಎದುರು ವಾರಣಾಸಿಯಲ್ಲಿ ಚುನಾವಣೆಗೆ ನಿಲ್ಲಲು ಹೋದರೆ ಅವರ ನಾಮಪತ್ರವೇ ತಿರಸ್ಕೃತವಾದ ಪವಾಡ ನಡೆಯಿತು! ಇದು ನಮ್ಮ ದೇಶದ ಕತೆ! ಸಹಜ ನಗೆ ಕಳೆದುಕೊಂಡ ನಾಡು ಅಸಹನೆಯ ಬೀಡಾಗತೊಡಗುತ್ತದೆ. ಸಂಗೀತ, ಕಲೆ ಸಾಹಿತ್ಯಗಳ ಖದರ್ ಕಳೆದುಕೊಂಡ ಸಮಾಜಗಳು ಸ್ಮಶಾನಗಳಾಗುತ್ತವೆ; ಮನುಷ್ಯರು ರಕ್ಕಸರಾಗತೊಡಗುತ್ತಾರೆ. ಸರ್ವಾಧಿಕಾರ ಸೃಷ್ಟಿಯಾಗುತ್ತದೆ.
ಆದರೆ ಅರಿಸ್ಟೋಫನಿಸ್ ದ ಕ್ಲೌಡ್ಸ್ ಥರದ ಕಾಮಿಡಿಯನ್ನು ನೋಡಿದಾಗ ಬರೆವ ಕಲೆಯ ಮತ್ತೊಂದು ಪ್ರಶ್ನೆ ಎದುರಾಗುತ್ತದೆ: ವೈನೋದಿಕ ನಾಟಕಕಾರನಾಗಲೀ, ಯಾವುದೇ ಥರದ ಲೇಖಕಿಯಾಗಲಿ, ಲೇಖಕನಾಗಲಿ, ಅವರ ಜೀವನ ದರ್ಶನ ಸಂಕುಚಿತವಾದರೆ, ವಸ್ತುನಿಷ್ಠ ನೋಟ ಮಂಕಾದರೆ ಅವರ ಬರವಣಿಗೆಗೆ, ಕಲೆಗೆ ಮಾರಕ ಹೊಡೆತ ಬೀಳುತ್ತದೆ. ಅದರ ಕೆಟ್ಟ ಪರಿಣಾಮ ಬರೆವವರ ಮೇಲೂ ಆಗುತ್ತದೆ. ಓದುವವರ ಮೇಲೂ ಆಗುತ್ತದೆ. ಅರಿಸ್ಟೋಫನಿಸ್ನ ಅದ್ಭುತ ಕಾಮಿಡಿ ಲೋಕದ ಬಗ್ಗೆ ಮುಂದೊಮ್ಮೆ ಬರೆಯುವೆ. ಸದ್ಯಕ್ಕೆ ಅಂಥ ಪ್ರತಿಭಾವಂತ ನಾಟಕಕಾರನ ಪೂರ್ವಗ್ರಹಗಳು ವಿಚಾರವಾದಿ ಸಾಕ್ರೆಟಿಸ್ ವ್ಯಕ್ತಿತ್ವಕ್ಕೆ ತಂದ ಕುತ್ತು ಎಂಥದೆಂಬುದನ್ನು ಮಾತ್ರ ದುಗುಡದಿಂದ ದಾಖಲಿಸುತ್ತಿರುವೆ. ಈ ಮಾತು ಬರೆವ ಗಳಿಗೆಯಲ್ಲಿ ನಮ್ಮ ಪ್ರತಿಭಾವಂತ ಲೇಖಕ ಲಂಕೇಶ್ ಒಮ್ಮೆ ರೈತ ಚಳುವಳಿಯನ್ನು ಬೆಂಬಲಿಸಿದ್ದರೂ, ಮುಂದೆ ನಾಡಿನ ದೊಡ್ಡ ರೈತನಾಯಕರಾದ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿಯವರ ಮೇಲೆ ಗೇಲಿಯ ಅಸ್ತ್ರ ಬಳಸಿ ಹಣಿಯಲೆತ್ನಿಸಿದ್ದು ನೆನಪಾಗುತ್ತದೆ. ಅರಿಸ್ಟೋಫನಿಸ್ನ ಬರ್ಬರತೆ ನನ್ನ ಕಣ್ಣ ಮುಂದೆಯೇ ನಡೆದಿರುವುದನ್ನು ಕಂಡು ದಟ್ಟ ವಿಷಾದಆವರಿಸತೊಡಗುತ್ತದೆ. ಈ ಬಗ್ಗೆ ಲಂಕೇಶರ ಜೊತೆ ವಾದಿಸಿದ್ದೂ ನೆನಪಾಗುತ್ತದೆ. ಮುಂದೆ ಎಂ.ಡಿ.ಎನ್. ಕುರಿತು ಬಂದ ಹೊಸ ಹೊಸ ಪುಸ್ತಕಗಳು ಈ ಗೇಲಿಯನ್ನು ಹಿಮ್ಮೆಟ್ಟಿಸಿರಬಹುದು ಎಂಬ ನೆಮ್ಮದಿಯೂ ಮೂಡುತ್ತದೆ!