ರೀ ರಿಲೀಸ್ನಲ್ಲೂ ಒಳ್ಳೆ ಗಳಿಕೆ ಮಾಡಿದ ಕನ್ನಡ ಸಿನಿಮಾಗಳು

ರೀ ರಿಲೀಸ್ನಲ್ಲೂ ಒಳ್ಳೆ ಗಳಿಕೆ ಮಾಡಿದ ಕನ್ನಡ ಸಿನಿಮಾಗಳು

ಸ್ಯಾಂಡಲ್ವುಡ್ : ಕರ್ನಾಟಕದಲ್ಲಿ ಮತ್ತೆ ಸ್ಟಾರ್ ಸಿನಿಮಾಗಳ ಕೊರತೆ ಕಾಣುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಕಳೆದ ಆಗಸ್ಟ್ ತಿಂಗಳಲ್ಲಿ ದುನಿಯಾ ವಿಜಯ್ ನಟನೆಯ ಭೀಮ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಚಿತ್ರಗಳು ಬಿಡುಗಡೆಯಾಗಿ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ಸು ಕಂಡಿದ್ದವು.

ಆದ್ರೀಗ ಸ್ಟಾರ್ ನಟರ ಸಿನಿಮಾಗಳಿಲ್ಲದೇ ವಾರಕ್ಕೆ ಹೊಸಬರ 3 ರಿಂದ 4 ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಕಂಟೆಂಟ್ ಇದ್ರೂ ಕೂಡಾ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ನೋಡುವ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ತೆಲುಗು ಚಿತ್ರರಂಗದಂತೆ ಕನ್ನಡದಲ್ಲಿ ಸ್ಟಾರ್ ನಟರ ಸಿನಿಮಾಗಳ ರೀ-ರಿಲೀಸ್ ಮಾಡುವ ಟ್ರೆಂಡ್ ಶುರುವಾಗಿದೆ.

ಸ್ಟಾರ್ ನಟರಾದ ದಿ. ಪುನೀತ್ ರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾಗಳು ರೀ ರಿಲೀಸ್ ಆಗುವುದರ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿವೆ. ಹಾಗಾದರೆ ಯಾವೆಲ್ಲಾ ಸಿನಿಮಾಗಳು ಎಷ್ಟು ಕಲೆಕ್ಷನ್ ಮಾಡಿವೆ ಎಂಬುದನ್ನು ನೋಡೋಣ ಬನ್ನಿ.

ಒಂದು ಗಮನಾರ್ಹ ವಿಷಯವೆಂದರೆ ರೀ ರಿಲೀಸ್ ಆಗಿರುವ ಸಿನಿಮಾಗಳು ಇತ್ತೀಚೆಗೆ ಬಿಡುಗಡೆಯಾಗಿರುವ ಸಿನಿಮಾಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿವೆ. ಈ ಬಗ್ಗೆ ಆರ್ಯನ್ ಚಿತ್ರದ ನಿರ್ಮಾಪಕ ಹಾಗೂ ಕಳೆದ 20 ವರ್ಷಗಳಿಂದ ಕನ್ನಡ ಸೇರಿದಂತೆ ಬಹು ಭಾಷೆಯ ಸಿನಿಮಾಗಳನ್ನು ಕರ್ನಾಟಕದ್ಯಾಂತ ವಿತರಣೆ ಮಾಡುವ ವಸೀಮ್ ಅವರು ಹೇಳುವ ಹಾಗೆ, ಪುನೀತ್ ರಾಜ್ಕುಮಾರ್ ಅಭಿನಯದ ಜಾಕಿ ಸಿನಿಮಾ ಮೊದಲ ಸ್ಥಾನದಲ್ಲಿದೆ. ಪರಮಾತ್ಮನ ಹುಟ್ಟು ಹಬ್ಬದ ಅಂಗವಾಗಿ ರೀ ರಿಲೀಸ್ ಆದ ಜಾಕಿ ಸಿನಿಮಾ ಎರಡು ವಾರಗಳ ಪ್ರದರ್ಶನ ಕಾಣುವ ಮೂಲಕ ಬರೋಬ್ಬರಿ 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮುಖೇನ ವಿತರಕ ಹಾಗೂ ನಿರ್ಮಾಪಕರ ಜೇಬು ತುಂಬಿಸಿತ್ತು.

2003ರಲ್ಲಿ ಬಿಡುಗಡೆ ಆಗಿ ದರ್ಶನ್ ಹಾಗೂ ನಿರ್ದೇಶಕ ಪ್ರೇಮ್ ಅವರಿಗೆ ಹೆಸರು ತಂದುಕೊಟ್ಟ ಚಿತ್ರ ‘ಕರಿಯ’. ರೌಡಿಸಂ ಕಥೆ ಆಧರಿಸಿದ ಕರಿಯ ಸಿನಿಮಾದಲ್ಲಿ ರಿಯಲ್ ರೌಡಿಗಳು ಅಭಿನಯಿಸುವುದರ ಜೊತೆಗೆ ದರ್ಶನ್ ಸಿನಿಮಾ ಕೆರಿಯರ್ಗೆ ದೊಡ್ಡ ಬ್ರೇಕ್ ನೀಡಿತ್ತು. ಈ ಚಿತ್ರ ಆಗಸ್ಟ್ 30 ರಂದು ಮರು ಬಿಡುಗಡೆ ಆಗುವುದರ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ 35 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು.

ಇದಕ್ಕೂ ಮುನ್ನ ಉಪೇಂದ್ರ ಅಭಿನಯಿಸಿ ನಿರ್ದೇಶನ ಮಾಡಿದ್ದ “ಎ” ಸಿನಿಮಾ ಕೂಡ ಮೇ ತಿಂಗಳಲ್ಲಿ ರೀ ರಿಲೀಸ್ ಆಗಿತ್ತು. ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಎ ಸಿನಿಮಾ ಕೂಡ ಒಂದು ಅನ್ನೋದು ಸಿನಿ ಪ್ರೇಮಿಗಳ ಅಭಿಪ್ರಾಯ. ಚಿತ್ರ ಒಂದು ವಾರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ 60 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು.

Leave a Reply

Your email address will not be published. Required fields are marked *