ಬೆಂಗಳೂರು: ಕುಮಾರಪರ್ವತ ಸೇರಿದಂತೆ ರಾಜ್ಯದ ಕೆಲವು ಅರಣ್ಯ ಪ್ರದೇಶಗಳಲ್ಲಿ ಇಂದು ಗುರುವಾರದಿಂದ ಚಾರಣಕ್ಕೆ ಅನುಮತಿ ನೀಡಲಾಗುವುದು ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಬಿ ಖಂಡ್ರೆ ಹೇಳಿದ್ದಾರೆ.
ಜನದಟ್ಟಣೆ ಮತ್ತು ಟ್ರೆಕ್ಕಿಂಗ್ ಮಾರ್ಗಗಳಲ್ಲಿ ಕಸ ಎಸೆಯುವ , ಜಾಗಗಳನ್ನು ಹಾಳು ಮಾಡುತ್ತಿರುವ ಬಗ್ಗೆ ದೂರುಗಳು ಸಾಕಷ್ಟು ಬಂದ ಹಿನ್ನೆಲೆಯಲ್ಲಿ ಕೆಲವು ತಿಂಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಟ್ರೆಕ್ಕಿಂಗ್ ಪುನಾರಂಭ ಮಾಡಿದ್ದು, ಚಾರಣಿಗರು ಈಗ ಅರಣ್ಯ ಇಲಾಖೆಯ ವೆಬ್ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ.
70ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಕಬ್ಬನ್ ಪಾರ್ಕ್ ನಿಂದ ಲಾಲ್ ಬಾಗ್ ವರೆಗೆ ನಡೆದ ವಾಕಥಾನ್ ಉದ್ಘಾಟಿಸಿ ಸಚಿವರು ಮಾತನಾಡಿದರು. ನಟ ರಿಷಬ್ ಶೆಟ್ಟಿ, ಅರಣ್ಯಾಧಿಕಾರಿಗಳು, ಸಂರಕ್ಷಣಾ ತಜ್ಞರು, ನಿಸರ್ಗ ಪ್ರೇಮಿಗಳು ವಾಕಥಾನ್ನಲ್ಲಿ ಭಾಗವಹಿಸಿದ್ದರು.
ಅರಣ್ಯ ಇಲಾಖೆ ಮತ್ತು ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಗೆ ಚಾರಣ ಮಾರ್ಗಗಳನ್ನು ಒಯ್ಯುವ ಸಾಮರ್ಥ್ಯದ ಅಧ್ಯಯನವನ್ನು ಕೈಗೊಳ್ಳಲು ಸೂಚಿಸಲಾಗಿದೆ. ಏಕ ಗವಾಕ್ಷಿ ಪೋರ್ಟಲ್ ಮೂಲಕ ಪ್ರವಾಸೋದ್ಯಮವನ್ನು ನಿಯಂತ್ರಿಸಲು ಸಹ ಘೋಷಿಸಲಾಯಿತು.
ಇನ್ನು ಮುಂದೆ, ಟ್ರೆಕ್ಕಿಂಗ್, ಸಫಾರಿ, ಅರಣ್ಯ ಅತಿಥಿಗೃಹಗಳು ಮತ್ತು ಬೋಟಿಂಗ್ಗೆ ಬುಕಿಂಗ್ಗಳನ್ನು ಇಲಾಖೆಯ ವೆಬ್ಸೈಟ್ ಮೂಲಕ ಮಾಡಬೇಕಾಗಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು TNIE ಗೆ ತಿಳಿಸಿದ್ದಾರೆ.
ಮಂಡಳಿಯ ವೆಬ್ಸೈಟ್ ಮೂಲಕ ಮಾಡಿದ ಬುಕ್ಕಿಂಗ್ಗಳಿಗೆ ಸಂಬಂಧಿಸಿದ ಹಲವಾರು ದೂರುಗಳನ್ನು ಗಮನದಲ್ಲಿಟ್ಟುಕೊಂಡು, ಅವುಗಳನ್ನು ಇಲಾಖೆಯ ಪೋರ್ಟಲ್ ಗೆ ಅಳವಡಿಸಲಾಗುವುದು. ಚಾರಣಿಗರು ಪ್ರತಿ ಬುಕಿಂಗ್ಗೆ 5,000 ರೂಪಾಯಿವರೆಗೆ ಪಾವತಿಸಬೇಕು. ಪ್ರವಾಸ ನಿರ್ವಾಹಕರು ಕೇವಲ 700 ರೂಪಾಯಿ ಟಿಕೆಟ್ ಇಲಾಖೆಗೆ ಪಾವತಿಸಿದ ಉದಾಹರಣೆಗಳಿವೆ. ಅಲ್ಲದೆ, ಯಾವುದೇ ನಿಯಮಾವಳಿ ಇಲ್ಲದೆ ಬುಕ್ಕಿಂಗ್ಗೆ ಅವಕಾಶ ನೀಡಿ ಕೆಲವೆಡೆ ಜನದಟ್ಟಣೆಗೆ ಕಾರಣವಾದ ಉದಾಹರಣೆಗಳಿವೆ.