ಬೆಂಗಳೂರು : ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆಯ ಬಹು ನಿರೀಕ್ಷಿತ ಮಾರ್ಗವೊಂದು 2025ರಲ್ಲಿ ಲೋಕಾರ್ಪಣೆಯಾಗಲಿದೆ. ಹಲವು ವಿಶೇಷತೆಗಳನ್ನು ಹೊಂದಿರುವ 18.82 ಕಿ. ಮೀ. ಉದ್ದದ ‘ಹಳದಿ’ ನಮ್ಮ ಮೆಟ್ರೋ ಮಾರ್ಗದಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಐಟಿ-ಬಿಟಿಯ ಲಕ್ಷಾಂತರ ಟೆಕ್ಕಿಗಳಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ವಾಣಿಜ್ಯ ಸಂಚಾರ ಯಾವಾಗ ಆರಂಭ? ಎಂಬ ಮಾಹಿತಿ ಸಿಕ್ಕಿಲ್ಲ.
ನಮ್ಮ ಮೆಟ್ರೋ ಹಳದಿ ಮಾರ್ಗ ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವೆ ಸಂಪರ್ಕ ಕಲ್ಪಿಸುತ್ತದೆ. ಸದ್ಯದ ಮಾಹಿತಿ ಪ್ರಕಾರ ಈ ತಿಂಗಳಿನಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಈ ಮಾರ್ಗದಲ್ಲಿ ಪರಿಶೀಲನೆ ನಡೆಸಿ, ರೈಲುಗಳು ವಾಣಿಜ್ಯ ಸಂಚಾರಕ್ಕೆ ಅಂತಿಮ ಒಪ್ಪಿಗೆ ನೀಡಲಿದ್ದಾರೆ. 2025ರಲ್ಲಿ ರೈಲು ಸಂಚಾರ ಪ್ರಾರಂಭವಾಗಲಿದೆ. ಆದರೆ ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವೆ ಮೆಟ್ರೋದಲ್ಲಿ ಸಂಚಾರ ನಡೆಸುವ ಟೆಕ್ಕಿಗಳು, ಇತರ ಪ್ರಯಾಣಿಕರಿಗೆ ಹೊಸ ಸಮಸ್ಯೆ ಎದುರಾಗಲಿದೆ ಅದು ವಾಹನಗಳ ಪಾರ್ಕಿಂಗ್ನದ್ದು, ಅದರಲ್ಲೂ ಸಹ ಕಾರುಗಳ ಪಾರ್ಕಿಂಗ್ ವಿಚಾರ ಈಗ ಬೆಳಕಿಗೆ ಬಂದಿದೆ. ಈ ಸಮಸ್ಯೆಯನ್ನು ಬಿಎಂಆರ್ಸಿಎಲ್ ಹೇಗೆ ನಿವಾರಿಸಲಿದೆ?
ಪಾರ್ಕಿಂಗ್ ಸೌಲಭ್ಯ ಒದಗಿಸಲು ಟೆಂಡರ್: ಬಿಎಂಆರ್ಸಿಎಲ್ ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ ಒದಗಿಸಲು ಟೆಂಡರ್ ಕರೆದಿದೆ. ಈ ಮಾರ್ಗದ 16 ನಿಲ್ದಾಣಗಳ ಪೈಕಿ 13 ನಿಲ್ದಾಣಗಳಲ್ಲಿ ಮಾತ್ರ ಪಾರ್ಕಿಂಗ್ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ ದ್ವಿಚಕ್ರವಾಹನಗಳ ಪಾರ್ಕಿಂಗ್ಗೆ ಮಾತ್ರ ಅವಕಾಶವಿದ್ದು, ಟೆಕ್ಕಿಗಳು ಮೆಟ್ರೋ ನಿಲ್ದಾಣದ ತನಕ ಕಾರಿನಲ್ಲಿ ಬಂದು ಅಲ್ಲಿಂದ ಮೆಟ್ರೋದಲ್ಲಿ ಕಛೇರಿಗೆ ಸಂಚಾರ ನಡೆಸಬೇಕಾದರೆ ಕಾರು ಪಾರ್ಕಿಂಗ್ಗೆ ಸ್ಥಳವನ್ನು ಹುಡುಕಿಕೊಳ್ಳಬೇಕು.
ಸದ್ಯದ ಮಾಹಿತಿ ಪ್ರಕಾರ 13 ನಿಲ್ದಾಣಗಳಲ್ಲಿ 2690 ಬೈಕ್ಗಳ ಪಾರ್ಕಿಂಗ್ಗೆ ಅವಕಾಶ ಸಿಗಲಿದೆ. ಎಲೆಕ್ಟ್ರಾನಿಕ್ ಸಿಟಿ-1 ನಿಲ್ದಾಣವೊಂದರಲ್ಲೇ 1 ಸಾವಿರ ಬೈಕ್ ಪಾರ್ಕ್ ಮಾಡಬಹುದು. ಆರ್. ವಿ. ರಸ್ತೆಯಲ್ಲಿ 223 ವಾಹನ ನಿಲ್ಲಿಸಬಹುದು. ಈ ಮಾರ್ಗದಲ್ಲಿ ಪ್ರತಿದಿನ ಸುಮಾರು 3 ಲಕ್ಷ ಜನರು ಸಂಚಾರ ನಡೆಸಬಹುದು ಎಂದು ಡಿಪಿಆರ್ ಅಂದಾಜಿಸಿದೆ. ಆದರೆ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಸಿಗಲಿದೆಯೇ? ಎಂಬ ಕುರಿತು ಈಗ ಚಿಂತೆ ಆರಂಭವಾಗಿದೆ. ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಮೂರು ಇಂಟರ್ ಚೇಂಜ್ ನಿಲ್ದಾಣಗಳು ಬರಲಿವೆ. ಹಸಿರು, ಗುಲಾಬಿ, ನೇರಳೆ ಮಾರ್ಗದ ಮೆಟ್ರೋಗೆ ಈ ಮಾರ್ಗ ಸಂಪರ್ಕ ಕಲ್ಪಿಸುತ್ತದೆ. ಆದರೆ ಇಷ್ಟು ದೊಡ್ಡ ಮಾರ್ಗದಕ್ಕೆ ಅಗತ್ಯವಾದಷ್ಟು ವಾಹನಗಳ ಪಾರ್ಕಿಂಗ್ ಸೌಲಭ್ಯ ಸದ್ಯಕ್ಕೆ ಲಭ್ಯವಿಲ್ಲ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲೂ ಹೇಗೆ ವಾಹನ ಪಾರ್ಕಿಂಗ್ಗೆ ಅವಕಾಶ ನೀಡಲಾಗುತ್ತದೆ ಎಂದು ಕಾದು ನೋಡಬೇಕಿದೆ. ಆರ್. ವಿ. ರಸ್ತೆ ಮೂಲಕ ಸುಮಾರು 1 ಲಕ್ಷ ಪ್ರಯಾಣಿಕರು, ಜಯದೇವ ಮೂಲಕ 82 ಸಾವಿರ ಮತ್ತು ಸಿಲ್ಕ್ ಬೋರ್ಡ್ ಮೂಲಕ ಸುಮಾರು 25 ಸಾವಿರ ಪ್ರಯಾಣಿಕರು ಸಂಚಾರ ನಡೆಸಬಹುದು ಎಂದು ಈ ಹಿಂದೆ ತಯಾರು ಮಾಡಿದ್ದ ವಿಸ್ತೃತ ಯೋಜನಾ ವರದಿ ಅಂದಾಜಿಸಿತ್ತು. ಆದರೆ ಇದು ತಯಾರಾಗಿದ್ದು 2021ರಲ್ಲಿ. ಈಗ ಈ ಮಾರ್ಗದ ಜನರ ಪ್ರಯಾಣದ ಸಂಖ್ಯೆ ಇನ್ನಷ್ಟು ಏರಿಕೆಯಾಗುವುದರಲ್ಲಿ ಅನುಮಾನವೇ ಇಲ್ಲ.
ಈ ಮಾರ್ಗದಲ್ಲಿ ಆರ್. ವಿ. ರಸ್ತೆ, ರಾಗಿಗುಡ್ಡ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್, ಸಿಂಗಸಂದ್ರ, ಹೊಸ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ ಫೌಂಡೇಷನ್, ಹೆಬ್ಬಗೋಡಿ, ಬೊಮ್ಮಸಂದ್ರ ನಿಲ್ದಾಣಗಳಿವೆ. ಆದರೆ ಯಾವ ನಿಲ್ದಾಣಗಳಲ್ಲೂ ಸಹ ಕನಿಷ್ಠ 500 ಬೈಕ್ ನಿಲ್ಲಿಸುವಷ್ಟು ಪಾರ್ಕಿಂಗ್ ಸೌಲಭ್ಯಗಳು ಸದ್ಯಕ್ಕೆ ಇಲ್ಲ. ಬಿಎಂಆರ್ಸಿಎಲ್ ಈ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದು, ರೈಲುಗಳ ಪ್ರಾಯೋಗಿಕ ಸಂಚಾರ ನಡೆಸುತ್ತಿದೆ. ಬೋಗಿಗಳ ಪೂರೈಕೆಯಾದ ತಕ್ಷಣ 10 ನಿಮಿಷಕ್ಕೆ ಒಂದು ರೈಲಿನಂತೆ ಮೆಟ್ರೋ ರೈಲು ಓಡಿಸಲು ಯೋಜನೆ ರೂಪಿಸಿದೆ. ಆದರೆ ಮೆಟ್ರೋದಲ್ಲಿ ಸಂಚಾರದಲ್ಲಿ ಕಾರು, ಬೈಕ್ಗಳಲ್ಲಿ ಆಗಮಿಸುವ ಪ್ರಯಾಣಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಹೇಗೆ? ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ.