ಉಡುಪಿ : ಹೆಜಮಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನುಮತಿ ಇಲ್ಲದೆ ಜಾಥಾ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪದಾಧಿಕಾರಿಗಳ ವಿರುದ್ಧ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿಸೆಂಬರ್ 10 ರಂದು ಮಧ್ಯಾಹ್ನ 2:30 ರಿಂದ 3:30 ರವರೆಗೆ ಎಸ್ಡಿಪಿಐ ಜಾಥಾ ನಡೆಸಿತು. ಪೊಲೀಸರ ಪ್ರಕಾರ, ಹೆಜಮಾಡಿಯ ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಬಳಿ ಗುಂಪು ಅಕ್ರಮವಾಗಿ ಜಮಾಯಿಸಿತ್ತು. ಚದುರಿಸಲು ಪಿಎಸ್ಐ ಸೂಚನೆ ನೀಡಿದರೂ ಕ್ರಮ ಕೈಗೊಳ್ಳದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದರು.
ಪೊಲೀಸರು ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಾಡುಂಬು, ಮುಖಂಡರಾದ ಹನೀಫ್ ಮೂಳೂರು, ನೂರುದ್ದೀನ್ ಮಲ್ಲಾರು, ಫಿರೋಜ್ ಕಂಚಿನಡ್ಕ, ತೌಫೀಕ್ ಉಚ್ಚಿಲ, ಮಜೀದ್ ಉಚ್ಚಿಲ, ಇಬ್ರಾಹಿಂ ಕಂಚಿನಡ್ಕ ಮತ್ತು ಇತರರ ವಿರುದ್ಧ ಕಲಂ 57, 189 (2), 18281, 3, 2818, BNS ನ 190 ಪ್ರಕಾರ ಪ್ರಕರಣ ದಾಖಲು ಮಾಡಲಾಗಿದೆ.
ಸುಮಾರು 75 ರಿಂದ 100 ಜನರು ಅನುಮತಿ ಪಡೆಯದೆ ಕಾರುಗಳು ಮತ್ತು ದ್ವಿಚಕ್ರ ವಾಹನಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯನ್ನು ಪ್ರಾರಂಭಿಸಿದರು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಡಿಪಿಐ ಸದಸ್ಯರ ಪ್ರಕಾರ, ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ ಸರ್ಕಾರದ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಪಕ್ಷವು ಉಡುಪಿಯಿಂದ ಬೆಳಗಾವಿಯವರೆಗೆ ಯೋಜಿಸಿರುವ ‘ಚಲೋ ಬೆಳಗಾವಿ – ಅಂಬೇಡ್ಕರ್ ಮಾರ್ಚ್ – 2’ ರ ಭಾಗವಾಗಿದೆ.