ಉತ್ತರ ಕನ್ನಡ: ಸಿದ್ದಾಪುರದ (Siddapura) ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಮದ್ಯ ಸೇವಿಸಿ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ರೋಷನ್ ಫರ್ನಾಂಡಿಸ್ ಎಂದು ಗುರುತಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 281, 125(ಎ),125(ಬಿ), 105 ಅಡಿ ಪ್ರಕರಣ ದಾಖಲಿಸಲಾಗಿದೆ
ಘಟನೆ ಏನು?
ಮಂಗಳವಾರ ರಾತ್ರಿ ಸಿದ್ದಾಪುರದ ರವೀಂದ್ರ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜಾತ್ರೆಗೆ ಬಂದಿದ್ದ ಭಕ್ತರ ಮೇಲೆ ಬೇಕಾಬಿಟ್ಟಿಯಾಗಿ ರೋಷನ್ ಕಾರು ಚಲಾಯಿಸಿದ್ದನು. ಈ ವೇಳೆ ಯುವತಿಯೊಬ್ಬರು ಸಾವನ್ನಪ್ಪಿದ್ದು, ಎಂಟು ಜನರು ಗಾಯಗೊಂಡಿದ್ದರು.
ಉದ್ದೇಶ ಪೂರ್ವಕವೇ?
ಆರೋಪಿ ರವೀಂದ್ರ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯೇ ಈತ ಮನೆ ಹೊಂದ್ದಾನೆ. ಇಸ್ರೇಲ್‌ನಲ್ಲಿ ಉದ್ಯೋಗಮಾಡಿಕೊಂಡಿದ್ದ ಈತ ಮರಳಿ ಸಿದ್ದಾಪುರಕ್ಕೆ ಬಂದಿದ್ದ. ಕೈಯಲ್ಲಿ ಏನು ಕೆಲಸವಿಲ್ಲದಿದ್ದರೂ ಬಿಂದಾಸ್ ಆಗಿ ಖರ್ಚು ಮಾಡಿಕೊಂಡು ಮದ್ಯವೆಸನಿಯಾಗಿದ್ದ. ಕಳೆದ ಎರಡು ದಿನದ ಹಿಂದೆ ಇದೇ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನೆಯಿಂದ ಕೋಪಗೊಂಡು ಗಲಾಟೆ ಮಾಡಿದ್ದ ಎಂದು ಕೆಲವರು ಹೇಳಿದ್ದಾರೆ.
ಕುಡಿದ ಮತ್ತಲ್ಲಿ ಕಾರು ಚಲಾಯಿಸಿಕೊಂಡು ಬಂದು, ರಸ್ತೆಯಲ್ಲಿ ಬ್ಯಾರಿಕೇಟ್ ಹಾಕಿದ್ದನ್ನು ನೋಡಿದ್ದರೂ ಕೂಡ ಹಾಗೆಯೇ ಹೋಗಿ ರಸ್ತೆಯ ಪಕ್ಕದಲ್ಲಿ ಬರುತಿದ್ದ ಅಕ್ಕ ತಂಗಿಯರಿಗೆ ಡಿಕ್ಕಿ ಹೊಡೆದಿದ್ದಾನೆ. ಆಗ ಓರ್ವ ಯುವತಿ ಸಾವನ್ನಪ್ಪಿದ್ದಾಳೆ. ಅಲ್ಲಿಂದ ಮತ್ತೆ ರಿವರ್ಸ್ ಹೋಗಿ ಏಕಾಏಕಿ ಮುಂದೆ ಬಂದು, ದೇವರ ಪಲ್ಲಕ್ಕಿ ಬರುವುದಕ್ಕಾಗಿ ಕಾದಿದ್ದ ಜನರ ಮೇಲೆ ಹತ್ತಿಸಿದ್ದಾನೆ.
ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಸೂಕ್ತ ತನಿಖೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇನ್ನೂ ಅಪಘಾತ ವೇಳೆ ಆರೋಪಿ ಮದ್ಯಪಾನ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಡಪಟ್ಟಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.