ಬೆಂಗಳೂರು || 40 ಅಡಿಗಿಂತ ಕಿರಿದಾದ ರಸ್ತೆಗಳಲ್ಲಿರುವ ಅಂಗಡಿಗಳ ವ್ಯಾಪಾರ ಪರವಾನಗಿ ರದ್ದು: BBMP

ಬೆಂಗಳೂರು || 40 ಅಡಿಗಿಂತ ಕಿರಿದಾದ ರಸ್ತೆಗಳಲ್ಲಿರುವ ಅಂಗಡಿಗಳ ವ್ಯಾಪಾರ ಪರವಾನಗಿ ರದ್ದು: BBMP

ಬೆಂಗಳೂರು: 40 ಅಡಿಗಿಂತ ಕಡಿಮೆ ಅಗಲವಿರುವ ರಸ್ತೆಗಳನ್ನು ಹೊಂದಿರುವ ವಸತಿ ಪ್ರದೇಶಗಳಲ್ಲಿರುವ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಬಿಬಿಎಂಪಿ ಹೇಳಿದೆ.

ಆರೋಗ್ಯ ವಿಶೇಷ ಆಯುಕ್ತ ಸುರಳಕರ್ ವಿಕಾಸ್ ಕಿಶೋರ್ ಅವರು ಮಾತನಾಡಿ, ಕಳೆದ 10 ವರ್ಷಗಳಿಂದ ಅಂದರೆ 2015ರ ನಂತರ ತೆರೆದ ಅಂಗಡಿಗಳು ವ್ಯಾಪಾರ ಪರವಾನಗಿಗಳನ್ನು ಇನ್ನು ಮುಂದೆ ನವೀಕರಿಸಲಾಗುವುದಿಲ್ಲ. ಪ್ರಮುಖವಾಗಿ ಅವರು 40 ಅಡಿಗಿಂತ ಕಡಿಮೆ ಅಗಲವಿರುವ ರಸ್ತೆಗಳನ್ನು ಹೊಂದಿರುವ ವಸತಿ ಪ್ರದೇಶಗಳಲ್ಲಿರುವ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳ ಲೈಸೆನ್ಸ್ ಮುಂದುವರೆಸುವುದಿಲ್ಲ ಎಂದು ಹೇಳಿದ್ದಾರೆ.

ಈ ಸಂಬಂಧ ಪಾಲಿಕೆ ಸುತ್ತೋಲೆ ಹೊರಡಿಸಿದ್ದು, ಫೆ.28ರ ಒಳಗೆ 2025-26ನೇ ಹಣಕಾಸು ವರ್ಷದ ವ್ಯಾಪಾರ ಪರವಾನಗಿಗಳ ನವೀಕರಣ ಮಾಡಬೇಕೆಂದು ಬಿಬಿಎಂಪಿ ಸೂಚಿಸಿದೆ.

ಉದ್ದಿಮೆದಾರರ ಅನುಕೂಲಕ್ಕೆ ತಕ್ಕಂತೆ 1 ರಿಂದ 5 ಆರ್ಥಿಕ ವರ್ಷಗಳ ಅವಧಿಗೆ ನವೀಕರಣ ಮಾಡಬಹುದಾಗಿದೆ. ನವೀಕರಣ ಶುಲ್ಕವನ್ನು ಉದ್ದಿಮೆದಾರರು ಕೋರುವ ಆರ್ಥಿಕ ವರ್ಷಕ್ಕೆ ಮಿತಿಗೊಳಿಸಿ ಪಾವತಿಸಬಹುದು. ಕಳೆದ ವರ್ಷದಂತೆಯೇ ಉದ್ದಿಮೆ ಪರವಾನಿಗೆ ಶುಲ್ಕವನ್ನು ಆನ್‌ಲೈನ್ ಮುಖಾಂತರ ಮಾಡಬೇಕು. ಫೆ.1 ರಿಂದ ಫೆ. 28ರ ವರೆಗೆ ದಂಡವಿಲ್ಲದೇ ಪರವಾನಿಗೆ ಶುಲ್ಕವನ್ನು ಪಾವತಿಸಬಹುದು ಎಂದು ತಿಳಿಸಿದೆ.

ಅದೇ ರೀತಿ, ಫೆ.28 ಗಡವು ಮುಗಿದ ಬಳಿಕ ದಂಡ ವಿಧಿಸಲಾಗುತ್ತದೆ. ಮಾರ್ಚ್ 1 ರಿಂದ 31 ರವರೆಗೆ ಪರವಾನಿಗೆ ನವೀಕರಣ ಶುಲ್ಕದ ಶೇ.25% ರಷ್ಟು ದಂಡ ಮೊತ್ತದೊಂದಿಗೆ ಪಾವತಿಸಿಕೊಳ್ಳಬೇಕಾಗುತ್ತದೆ. ಏಪ್ರಿಲ್ 1 ರಿಂದ ಪರವಾನಿಗೆ ಶುಲ್ಕದ ಶೇ.100ರಷ್ಟು ದಂಡದ ಮೊತ್ತದೊಂದಿಗೆ ಪರವಾನಿಗೆ ಶುಲ್ಕವನ್ನು ಪಾವತಿಸಿಕೊಳ್ಳಬೇಕಿರುತ್ತದೆ ಎಂದು ಬಿಬಿಎಂಪಿ ಹೇಳಿದೆ.

Leave a Reply

Your email address will not be published. Required fields are marked *