ಬೆಂಗಳೂರು: ಬೆಂಗಳೂರು ಮೆಟ್ರೋ ದರವನ್ನು ಏಕಾಏಕಿ ದುಪ್ಪಟ್ಟು ಹೆಚ್ಚಿಸಿರುವ ಬೆಂಗಳೂರು ಮೆಟ್ರೋ ನಿಗಮದ ಕ್ರಮವನ್ನು ಖಂಡಿಸಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ಈ ದರ ಹೆಚ್ಚಳ ದೆಹಲಿ ರಾಜ್ಯದ ಚುನಾವಣೆಯ ನಂತರ ಕೇಂದ್ರ ಸರ್ಕಾರ ಬೆಂಗಳೂರಿಗರಿಗೆ ನೀಡುತ್ತಿರುವ ಕೊಡುಗೆ , ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರದ ಜನಸಾಮಾನ್ಯ ವಿರೋಧಿ ನಿಲುವನ್ನು ಸ್ಪಷ್ಟಪಡಿಸುತ್ತಿದೆ. ನಿಗಮವು ತನ್ನ ಹೇಳಿಕೆಯಲ್ಲಿ ದೆಹಲಿ ಚುನಾವಣೆಯ ನಿಮಿತ್ತ ದರ ಏರಿಸಿರಲಿಲ್ಲ ಎಂದು ಹೇಳಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದರು.
ರಾಜ್ಯ , ಕೇಂದ್ರ ಸರ್ಕಾರದ ಉನ್ನತ ಮಟ್ಟದ ಕಾರ್ಯದರ್ಶಿಗಳು ಹಾಗೂ ನ್ಯಾಯಾಧೀಶರ ಬೆಲೆ ಹೆಚ್ಚಳ ಸಮಿತಿಯು ಜನಸಾಮಾನ್ಯನು ಈಗಾಗಲೇ ಎಲ್ಲ ಅವಶ್ಯಕತೆಗಳ ಬೆಲೆ ಏರಿಕೆಯಿಂದಾಗಿ ತತ್ತರಿಸುತ್ತಿರುವ ಸಂದರ್ಭದಲ್ಲಿ ಮೆಟ್ರೋ ದರ ಹೆಚ್ಚಳದಿಂದಾಗಿ ಮತ್ತೊಂದು ಬರೆಯನ್ನು ಎಳೆದಿದ್ದಾರೆ. ಮಹಾನಗರಿಗಳ ಅದರಲ್ಲೂ ಬೆಂಗಳೂರಿನಂತಹ ವಿಶ್ವಮಟ್ಟದ ನಗರದಲ್ಲಿ ಸಂಚಾರ ಒತ್ತಡದ ಸಮಸ್ಯೆಯಿಂದಾಗಿ ದೇಶದ ಆರ್ಥಿಕತೆಯೇ ಕುಸಿಯುತ್ತಿರುವ ಕಾಲಘಟ್ಟದಲ್ಲಿ ಮೆಟ್ರೋ ಸಂಚಾರದಿಂದಾಗಿ ಸಂಚಾರದ ಒತ್ತಡ ಕಡಿಮೆ ಮಾಡುವ ಮೂಲ ಆಶಯವನ್ನೇ ಮೆಟ್ರೋ ನಿಗಮ ಹಾಗೂ ರಾಜ್ಯ — ಕೇಂದ್ರ ಸರ್ಕಾರಗಳು ಮರೆತಿರುವುದು ನಿಜಕ್ಕೂ ಶೋಚನೀಯ ಸಂಗತಿ ಎಂದು ತಿಳಿಸಿದರು.
ಬೆಂಗಳೂರು ಮೆಟ್ರೋ ನಿಗಮದ ನೌಕರರ ಸಂಘದವರೇ ಈ ರೀತಿಯ ಬೆಲೆ ಏರಿಕೆಯನ್ನು ಖಂಡಿಸಿ ಪರಿಹಾರ ಕ್ರಮಗಳನ್ನು ಸೂಚಿಸಿದ್ದರು. ಅಧಿಕಾರಿಗಳ ಅಂದಾದುಂದಿ ದರ್ಬಾರ್, ಮೆಟ್ರೋ ಆಸ್ತಿಗಳ ಬಾಡಿಗೆ ಸಂಗ್ರಹಣೆಯಲ್ಲಿ ವೈಫಲ್ಯ, ಸ್ವಚ್ಛತೆಯ ನೆಪದಲ್ಲಿ ಪ್ರತಿವರ್ಷ ನೂರಾರು ಕೋಟಿಗಳ ಲೂಟಿ , ಅನವಶ್ಯಕ ಸಿಬ್ಬಂದಿಗಳ ನೇಮಕ ಹಾಗೂ ಇನ್ನೂ ಮುಂತಾದ ವಿಷಯಗಳಲ್ಲಿ ಅಧಿಕಾರಿಗಳ ನಿರ್ಲಕ್ಷತನ, ಬೇಜವಾಬ್ದಾರಿತನಗಳಿಂದಾಗಿ ಬೆಂಗಳೂರಿನ ಜನಸಾಮಾನ್ಯನು ಬೆಲೆ ತೆರುವಂತಾಗಿದೆ ಎಂದು ಜಗದೀಶ್ ಅಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಅವರು ಮಾತನಾಡಿ, ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಮೆಟ್ರೋ ಹೆಚ್ಚಳದ ಬಗ್ಗೆ ನಮ್ಮ ಆಕ್ಷೇಪಣೆ ಏನು ಇಲ್ಲ ಎಂದು ಹೇಳಿರುವುದು 136 ಸ್ಥಾನಗಳನ್ನು ನೀಡಿ ರಾಜ್ಯದಲ್ಲಿ ಅಧಿಕಾರ ನೀಡಿದಂತಹ ಕರ್ನಾಟಕದ ಪ್ರಭುದ್ಧ ಜನತೆಗೆ ಮಾಡಿದಂತಹ ಮಹಾ ದ್ರೋಹ ಎಂದು ಖಂಡಿಸಿದರು.
ಆಮ್ ಆದ್ಮಿ ಪಕ್ಷವು ಈ ತಕ್ಷಣದಿಂದಲೇ ಬಿಜೆಪಿಯ ಬೆಂಗಳೂರಿನ ಮೂವರು ಲೋಕಸಭಾ ಸದಸ್ಯರು ಹಾಗೂ ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರುಗಳು ಬೀದಿಗಿಳಿದು ಹೋರಾಟ ಮಾಡಬೇಕು. ನಮ್ಮ ಪಕ್ಷವೂ ಸಹ ಬೆಂಗಳೂರಿಗರೊಂದಿಗೆ ಉಗ್ರ ಸ್ವರೂಪದ ಹೋರಾಟವನ್ನು ಕೈಗೊಳ್ಳುತ್ತದೆ. ಯಾವುದೇ ಕಾರಣಕ್ಕೂ ಬೆಲೆ ಏರಿಕೆಯನ್ನು ಹೆಚ್ಚಿಸಲು ಬಿಡುವುದಿಲ್ಲ ಎಂದು ಬೆಂಗಳೂರು ನಗರ ಅಧ್ಯಕ್ಷ ಡಾ ಸತೀಶ್ ಎಚ್ಚರಿಸಿದರು.