ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡದಲ್ಲಿಯೂ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಶನಿವಾರ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಎನ್‌ಎಚ್‌ಎಐ ಮತ್ತು ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ರಾಜ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಲಾಖೆಯಲ್ಲಿ ಬಡ್ತಿ ನೀಡಲು ನಡೆಸುವ ‘ಸಾಮಾನ್ಯ ವಿಭಾಗ ಸ್ಪರ್ಧಾತ್ಮಕ ಪರೀಕ್ಷೆ’ (ಜಿಡಿಸಿಇ) ಬರೆಯಲು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು. ಕನ್ನಡದಲ್ಲಿಯೂ ಅವಕಾಶ ಇರಬೇಕು ಎಂದು ಒತ್ತಾಯ ಬಂದಿರುವುದರಿಂದ ಪರೀಕ್ಷೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದರು.
ಅಂತೆಯೇ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ನೀಡಿ ಸುತ್ತೋಲೆ ಹೊರಡಿಸುವಂತೆ ರೈಲ್ವೆ ಬೋರ್ಡ್ ಪ್ರಧಾನ ವ್ಯವಸ್ಥಾಪಕ ರಿಗೆ ಸೂಚನೆ ನೀಡಲಾಗಿದೆ. ಲೋಕೊ ಪೈಲೆಟ್ ಹುದ್ದೆಗಳ ಪರೀಕ್ಷಾ ಸುತ್ತೋಲೆ ಕನ್ನಡದಲ್ಲಿ ಇಲ್ಲದೇ ಇರುವುದನ್ನು ಸಂಸದ ತೇಜಸ್ವಿ ಸೂರ್ಯ ಗಮನಕ್ಕೆ ತಂದಿದ್ದರು. ಕನ್ನಡದಲ್ಲಿಯೂ ಸುತ್ತೋಲೆ ಹೊರಡಿಸಲು ತಿಳಿಸಿದ್ದೇನೆ. ಸೀಮಿತ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆ (ಎಲ್‌ಡಿಸಿಇ) ಸೇರಿದಂತೆ ರೈಲ್ವೆಯ ಎಲ್ಲ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸಲು ಅವಕಾಶ ಕಲ್ಪಿಸಲಾಗುವುದು’ ಎಂದು ಸೋಮಣ್ಣ ಭರವಸೆ ನೀಡಿದರು.