ಬೆಂಗಳೂರು: ಬೆಂಗಳೂರು ನಗರದಿಂದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವುದು ಸವಾಲಿನ ಕೆಲಸವಾಗಿದೆ. ಸಂಚಾರ ದಟ್ಟಣೆಯ ಕಾರಣ ವಿಮಾನ ನಿಲ್ದಾಣದ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರಯಾಣಿಕರ ತೊಂದರೆ ನಿವಾರಣೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯೋಜನೆಯೊಂದನ್ನು ರೂಪಿಸಿದೆ.
ಮಾಹಿತಿಗಳ ಪ್ರಕಾರ ಬಿಬಿಎಂಪಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಎರಡು ಲಿಂಕ್ ರಸ್ತೆಯನ್ನು ನಿರ್ಮಾಣ ಮಾಡಲಿದೆ. ಇದಕ್ಕಾಗಿ ಡಿಪಿಆರ್ ತಯಾರು ಮಾಡಲು ಟೆಂಡರ್ ಆಹ್ವಾನಿಸಿದೆ. ಆದರೆ ಈ ರಸ್ತೆ ಬಿಬಿಎಂಪಿ ವ್ಯಾಪ್ತಿಯನ್ನು ಮೀರಲಿದ್ದು, ಯೋಜನೆಗೆ ಒಪ್ಪಿಗೆ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.
ಬಿಬಿಎಂಪಿ ಯಲಹಂಕ ವಲಯದ ಮೂಲ ಸೌಕರ್ಯ ವಿಭಾಗದಿಂದ ಎರಡು ಲಿಂಕ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ. ಇದಕ್ಕೆ ಅಗತ್ಯ ಇರುವ ಅನುದಾನ, ಭೂಮಿ, ಭೂ ಸ್ವಾಧೀನ ವೆಚ್ಚ, ಪ್ರಸ್ತುತ ಇರುವ ರಸ್ತೆಯ ಡಾಂಬರೀಕರಣ ಮುಂತಾದ ವಿವರಗಳನ್ನು ಸೇರಿಸಿ ಡಿಪಿಆರ್ ತಯಾರು ಮಾಡಲಾಗುತ್ತದೆ.
ಪರ್ಯಾಯ ರಸ್ತೆ ನಿರ್ಮಾಣ: ಸದ್ಯ ಬಾಗಲೂರು ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ರಸ್ತೆಯೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ ಈಗ ಯೋಜನೆ ರೂಪಿಸಿರುವ ಎರಡು ಲಿಂಕ್ ರಸ್ತೆಗಳು ಬೇರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ರಸ್ತೆ ನಿರ್ಮಾಣದ ಮೂಲಕ ವಿಮಾನ ನಿಲ್ದಾಣದ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದು ಯೋಜನೆಯ ಉದ್ದೇಶವಾಗಿದೆ.
ಒಂದು ರಸ್ತೆ ಬಾಗಲೂರು ಕಂಟ್ರಿ ಕ್ಲಬ್ ಸಮೀಪದಲ್ಲಿ ಹಾದು ಹೋಗಲಿದೆ. ಮತ್ತೊಂದು ರಸ್ತೆ ಬೇಗೂರು ಬಳಿಯ ವಿದ್ಯುತ್ ಪ್ರಸರಣಾ ಘಟಕದ ಸಮೀಪದಿಂದ ಸಾದಹಳ್ಳಿ ಗೇಟ್ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ. ಎರಡು ಲಿಂಕ್ ರಸ್ತೆಗಳ ಒಟ್ಟು ಉದ್ದ 13.5 ಕಿ. ಮೀ. ಎಂದು ಅಂದಾಜಿಸಲಾಗಿದೆ. ಈ ಯೋಜನೆಗೆ ಸುಮಾರು 240 ಕೋಟಿ ರೂ. ವೆಚ್ಚವಾಗಬಹುದು. ಇಂಜಿನಿಯರ್ಗಳ ಪ್ರಕಾರ ಎರಡು ರಸ್ತೆಗಳನ್ನು ಬಹುತೇಕ ಹೊಸದಾಗಿ ನಿರ್ಮಾಣ ಮಾಡಬೇಕಿದೆ. ಕಂದಾಯ ಲೇಔಟ್ಗಳಲ್ಲಿ ಒಂದಷ್ಟು ಉದ್ದದ ರಸ್ತೆಗಳಿದ್ದು, ಅದನ್ನು ವಿಸ್ತರಣೆ ಮಾಡಿ, ಇನ್ನಷ್ಟು ಅಭಿವೃದ್ಧಿಗೊಳಿಸಿ ಹೊಸ ಲಿಂಕ್ ರಸ್ತೆಗೆ ಸೇರಿಸಿಕೊಳ್ಳಲಾಗುತ್ತದೆ. ಉಳಿದ ಭಾಗದಲ್ಲಿ ಭೂಮಿ ಸ್ವಾಧೀನ ಮಾಡಿಕೊಂಡು ಹೊಸ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಕರ್ನಾಟಕ ಸರ್ಕಾರದ ಸೂಚನೆಯಂತೆಯೇ ಈ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಳ್ಳಲಿದೆ. ಡಿಪಿಆರ್ ತಯಾರಿ ಬಳಿಕ ಯೋಜನೆಗೆ ಎಷ್ಟು ಭೂಮಿ ಅಗತ್ಯವಿದೆ? ಎಂಬ ಮಾಹಿತಿ ಸಿಗಲಿದೆ. ಈ ಯೋಜನೆಗೆ ಅಭಿವೃದ್ಧಿ ಹಕ್ಕು ವರ್ಗಾವಣೆ ಅನ್ವಯ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿ ಇದೆ.
100 ಮೀಟರ್ ಅಗಲವಾದ ರಸ್ತೆಗಳು ಇದಾಗಿದ್ದು, ಈ ಲಿಂಕ್ ರಸ್ತೆಯಲ್ಲಿ ಎರಡು ಫ್ಲೈ ಓವರ್ ಮತ್ತು ಒಂದು ರೈಲ್ವೆ ಮೇಲ್ಸೇತುವೆ ಸಹ ಬರಲಿದೆ. ಭೂ ಸ್ವಾಧೀನ ಸೇರಿದಂತೆ ಇತರ ವೆಚ್ಚ ಎಷ್ಟಾಗಬಹುದು? ಎಂದು ಡಿಪಿಆರ್ನಲ್ಲಿ ತಿಳಿಯಲಿದೆ. ಡಿಪಿಆರ್ ತಯಾರು ಮಾಡಲು 11.83 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.