ಸಾಮಾಜಿಕ ಜಾಲತಾಣ ವೇದಿಕೆಗಳಾದ ವಾಟ್ಸ್ಯಾಪ್, ಇನ್ಸ್ಟಾಗ್ರಾಮ್, ಟಿಕ್ ಟಾಕ್ ಮತ್ತು ಯೂಟ್ಯೂಬ್ ಗಳನ್ನು ನಿಷೇಧ ಮಾಡಿ ಭಾರತದ ನೆರೆ ದೇಶ ಬಾಂಗ್ಲಾದೇಶ (Bangladesh) ಆದೇಶಿಸಿದೆ. ಸರ್ಕಾರಿ ಉದ್ಯೋಗಗಳಿಗೆ ಕೋಟಾ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಲಾಗಿದೆ.
ದೇಶದಲ್ಲಿ ಜನರು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ಬಾಂಗ್ಲಾ ಸರ್ಕಾರ ನಿಷೇಧಿಸಿದೆ. ಈ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳ ಪ್ರವೇಶವನ್ನು ಬಾಂಗ್ಲಾದೇಶದಾದ್ಯಂತ ಸೀಮಿತ ಮಾಡಲಾಗಿದೆ. ಈ ವಿಚಾರವನ್ನು ಗ್ಲೋಬಲ್ ಐಸ್ ನ್ಯೂಸ್ ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ ವರದಿ ಮಾಡಿದೆ.
ಟರ್ಕಿ ದೇಶವೂ ಇದೇ ರೀತಿಯ ನಿಷೇಧ ಮಾಡಿದೆ. ಟರ್ಕಿಯಲ್ಲಿ ಇನ್ಸ್ಟಾಗ್ರಾಮ್ ಆಪ್ ಬಳಕೆ ಮಾಡುವುದನ್ನು ನಿಷೇಧಿಸಿದೆ. ಬಾಂಗ್ಲಾದೇಶದಲ್ಲಿ ಮೆಟಾ ಜಾಲತಾಣಗಳಿಗೆ ನಿರ್ಬಂಧ ಹೇರಿರುವುದು ಇದೇ ಮೊದಲೇನಲ್ಲ.
ಜುಲೈನಿಂದಲೇ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಬ್ಯಾನ್ ಮಾಡಲಾಗಿತ್ತು. ಏತನ್ಮಧ್ಯೆ, ಜುಲೈ 23 ರಂದು ಬ್ರಾಡ್ಬ್ಯಾಂಡ್ ಸೇವೆಗಳನ್ನು ಭಾಗಶಃ ಮರು ಸ್ಥಾಪಿಸಲಾಯಿತು, ಜುಲೈ 28 ರವರೆಗೆ ಮೊಬೈಲ್ ನೆಟ್ವರ್ಕ್ ಗಳು ಆಫ್ ಲೈನ್ ನಲ್ಲಿದ್ದವು. ಕೋಟಾ ಸುಧಾರಣೆಗಳ ಕುರಿತು ದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಪ್ರತಿಭಟನೆಯ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ.