ಬೆಂಗಳೂರು: ರಾತ್ರಿ ಸಮಯದಲ್ಲಿ ತಪಾಸಣೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಬೈಕ್ಗೆ ಕಾರು ಗುದ್ದಿಸಿ ಗಾಯಗೊಳಿಸಿದ್ದ ಆರೋಪಿಯನ್ನು ಮಾಗಡಿ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಪಿ. ಅಗ್ರಹಾರದ ಭುವನೇಶ್ವರಿ ನಗರದ ನಿವಾಸಿ ಮಹಾದೇವಸ್ವಾಮಿ (33) ಬಂಧಿತ ಆರೋಪಿ. ಮಾ.3ರಂದು ರಾತ್ರಿ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳತ್ತ ಕಾರು ನುಗ್ಗಿಸಿದ್ದ ಆರೋಪಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ.

ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ನಾಕಾಬಂದಿ ಪಾಯಿಂಟ್ ಬಳಿ ನಿಂತಿದ್ದ ಮಾಗಡಿ ರೋಡ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಧರೆಪ್ಪ ಟೊಣ್ಣೆ, ಕಾರಿನಲ್ಲಿ ಬಂದಿದ್ದ ಆರೋಪಿಗೆ ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ ಆರೋಪಿ ಮಹಾದೇವಸ್ವಾಮಿ ಕಾರು ನಿಲ್ಲಿಸದೆ ಅಜಾಗರೂಕತೆಯಿಂದ ಹೆಡ್ ಕಾನ್ಸ್ಟೇಬಲ್ರತ್ತ ತನ್ನ ಕಾರು ನುಗ್ಗಿಸಿದ್ದ. ತಪ್ಪಿಸಿಕೊಳ್ಳುವ ಯತ್ನದಲ್ಲಿ ಕಾನ್ಸ್ಟೇಬಲ್ಗಳಾದ ಧರೆಪ್ಪ ಟೊಣ್ಣೆ ಹಾಗೂ ಕಾರ್ತಿಕ್ ಯು.ಕೆ ಅವರಿಗೆ ಗಾಯಗಳಾಗಿವೆ ಎಂದು ಸ್ಥಳದಲ್ಲಿದ್ದ ಪಿಎಸ್ಐ ಮಂಜುನಾಥ್ ಎನ್. ವಿ ದೂರು ನೀಡಿದ್ದರು.
ದೂರಿನನ್ವಯ ಆರೋಪಿಯ ವಿರುದ್ಧ ಹತ್ಯೆ ಯತ್ನ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮಾಗಡಿ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನ ಪತ್ತೆಹಚ್ಚಿ ಬಂಧಿಸಿರುವ ಪೊಲೀಸರು ಆತನ ಕಾರನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.