ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಬೆಳ್ಳಿ ಮಹೋತ್ಸವದ ‘ಮುದ್ದಂಡ ಕಪ್ ಹಾಕಿ ಉತ್ಸವ-2025’ಕ್ಕೆ ಚಾಲನೆ ಸಿಕ್ಕಿದೆ. ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಹಾಗೂ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಅವರು ‘ಬೆಳ್ಳಿಯ ಸ್ಟಿಕ್’ನಿಂದ ‘ಬೆಳ್ಳಿಯ ಚೆಂಡು’ ತಳ್ಳುವ ಮೂಲಕ ಪಂದ್ಯಾವಳಿಗೆ ವಿಧ್ಯುಕ್ತ ಚಾಲನೆ ನೀಡಿದರು.

ಕೊಡವ ಕುಟಂಬಗಳ ಅತ್ಯಂತ ವಿಶಿಷ್ಟವಾದ ‘ಐನ್ ಮನೆ’ ವಿನ್ಯಾಸದ ಅತ್ಯಾಕರ್ಷಕ ವೇದಿಕೆಯಲ್ಲಿ ಜ್ಯೋತಿಯನ್ನು ಬೆಳಗುವ ಮೂಲಕ ಸಭಾ ಸಮಾರಂಭಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಮುದ್ದಂಡ ಕಪ್ ಹಾಕಿ ಉತ್ಸವದ ಹಿನ್ನೆಲೆ, ಇಲ್ಲಿಯವರೆಗೆ ಹಾಕಿ ಉತ್ಸವ ಆಯೋಜಿಸಿದ ಕುಟುಂಬಗಳ ಐನ್ ಮನೆಗಳಿಗೆ ತೆರಳಿದ ಜ್ಯೋತಿಯನ್ನು ಮೈದಾನಕ್ಕೆ ತರಲಾಯಿತು. ಜ್ಯೋತಿಯನ್ನು ಸ್ವೀಕರಿಸಿದ ಅರ್ಜುನ ಮತ್ತು ಏಕಲವ್ಯ ಪ್ರಶಸ್ತಿ ಪುರಸ್ಕೃತ, ಮಾಜಿ ಒಲಂಪಿಯನ್ ಡಾ.ಅಂಜಪರವಂಡ ಸುಬ್ಬಯ್ಯ ‘ಕೀಡಾ ಜ್ಯೋತಿಯನ್ನು’ ಬೆಳಗಿದರು. ಕ್ರೀಡಾಂಗಣದಲ್ಲಿ ಮ್ಯಾರಥನ್ ಓಟದ ಸಂದರ್ಭ ಕಂಬೆಯಂಡ ದಿವ್ಯ ಓಡಿ ಗಮನ ಸೆಳೆದರು.
1997ರ ಪಾಂಡಂಡ ಕುಟುಂಬಸ್ಥರಿಂದ ಆರಂಭಗೊಂಡ ಕೊಡವ ಹಾಕಿ ಉತ್ಸವವನ್ನು ಕಳೆದ ಇಪ್ಪತ್ತನಾಲ್ಕು ವರ್ಷಗಳ ಕಾಲ ಆಯೋಜಿಸಿದ 24 ಕೊಡವ ಕುಟುಂಬಗಳಿಗೆ, ಸಾಂಪ್ರದಾಯಿಕವಾದ ‘ಬಾಳೆ ಬೇಂಗ್ವೊ’ (ಬಾಳೆ ಕಡಿಯುವ) ಅವಕಾಶವನ್ನು ನೀಡುವ ಮೂಲಕ ಗೌರವಿಸಲಾಯಿತು. ಪ್ರತಿ ಕುಟುಂಬದ ಪ್ರತಿನಿಧಿ ಬಾಳೆ ಕಡಿಯುವುದಕ್ಕೂ ಮುನ್ನ ನಭಕ್ಕೆ ಗುಂಡು ಹಾರಿಸುತ್ತಿದ್ದುದು ವಿಶೇಷ. ಆರಂಭದಲ್ಲಿ ಕೊಡವ ಹಾಕಿ ಅಕಾಡೆಮಿಗೂ ಬಾಳೆ ಬೇಂಗ್ವೊ ಗೌರವ ನೀಡಲಾಯಿತು. ‘ಮುದ್ದಂಡ ಹಾಕಿ ನಮ್ಮೆ’ ಸ್ಮರಣ ಸಂಚಿಕೆ ಬಿಡುಗಡೆ ಹಾಕಿ ಉತ್ಸವದ ಆರಂಭಕ್ಕೂ ಮುನ್ನ ಕೊಡವ ಹಾಕಿ ಅಕಾಡೆಮಿ ಧ್ವಜವನ್ನು ಅಕಾಡೆಮಿ ಅಧ್ಯಕ್ಷರಾದ ಪಾಂಡಂಡ ಬೋಪಣ್ಣ, ಮುದ್ದಂಡ ಕಪ್ ಹಾಕಿ ಉತ್ಸವದ ಧ್ವಜವನ್ನು ಮುದ್ದಂಡ ಕುಟುಂಬದ ಪಟ್ಟೆದಾರರಾದ ಡಾಲಿ ದೇವಯ್ಯ ಆರೋಹಣಗೊಳಿಸಿದರು. ಕಾರ್ಯಕ್ರಮದಲ್ಲಿ ಈ ಹಿಂದೆ ಹಾಕಿ ಉತ್ಸವ ನಡೆಸಿದ ಅಪ್ಪಚೆಟ್ಟೋಳಂಡ ಕುಟುಂಬದ ಸದಸ್ಯರಿಗೆ ಮುದ್ದಂಡ ಹಾಕಿ ಕುಟುಂಬದ ಪ್ರಮುಖರು ಸ್ಮರಣಿಕೆ ನೀಡುವ ಮೂಲಕ ಗೌರವಿಸಿದರು.
ಕ್ರೀಡಾಜ್ಯೋತಿ ಜಿಲ್ಲೆಯಲ್ಲಿ ಈತನಕ ಹಾಕಿ ಉತ್ಸವ ಆಯೋಜಿಸಿದ ಒಟ್ಟು 24 ಕುಟುಂಬಗಳ ಐನ್ ಮನೆಗಳಿಗೆ ಒಟ್ಟು 260 ಕಿ.ಮೀ ಸಾಗಿದೆ. ಇದರಲ್ಲಿ 128 ಕಿ.ಮೀ ಮೆರಥಾನ್ ಓಟದ ಮೂಲಕ ಕೊಂಡೊಯ್ಯಲಾಗಿದೆ. ಮೆರಥಾನ್ ಓಟದಲ್ಲಿ ಆಲ್ಟಾç ಮೆರಥಾನ್ಗಳಾದ ಪುಲಿಯಂಡ ಗೌತಮ್, ಮುರುವಂಡ ಸ್ಫೂರ್ತಿ ಸೀತಮ್ಮ, ಕೂತಿರ ಬಿದ್ದಪ್ಪ, ಪಾಂಡಂಡ ವಚನ್ ನಾಣಯ್ಯ, ನೆಲ್ಲಪಟ್ಟಿರ ಶ್ರೇಯಸ್, ಅಯ್ಯಕುಟ್ಟಿರ ಡಾನಿಶ್ 128 ಕಿ.ಮೀ ಓಡಿದ್ದು, ಕಾರ್ಯಕ್ರಮದಲ್ಲಿ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದೇ ವೇಳೆ ಕೊಡವ ಹಾಕಿ ಉತ್ಸವಕ್ಕೆ ಸಂಬಂಧಿಸಿದ ‘ಮುದ್ದಂಡ ಹಾಕಿ ನಮ್ಮೆ’ ಸ್ಮರಣ ಸಂಚಿಕೆ ಹಾಗೂ ಬಿದ್ದಂಡ ನಾಣಯ್ಯ ರಚಿತ ಕೊಡವ ಹಾಕಿ ಹಾಡನ್ನು ಇದೇ ಸಂದರ್ಭ ಅತಿಥಿ ಗಣ್ಯರು ಅನಾವರಣಗೊಳಿಸಿದರು. ಪಂದ್ಯಾವಳಿಗೆ ಶುಭ ಹಾರೈಸಿದ ಸಂಸದ ಯದುವೀರ್ ಈ ಸಂದರ್ಭ ಉಪಸ್ಥಿತರಿದ್ದ ಮೈಸೂರು ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಮಾತನಾಡಿ, ‘ನಿರಂತರವಾಗಿ ಇಂತಹ ಬೃಹತ್ ಪಂದ್ಯಾವಳಿ ಆಯೋಜನೆ ಸುಲಭ ಸಾಧ್ಯವಲ್ಲ. ಹಾಕಿ ಉತ್ಸವದ ಜನಕ ಪಾಂಡಂಡ ಕುಟ್ಟಪ್ಪ ಅವರ ಚಿಂತನೆಗಳಂತೆ ಮುಂದೆಯೂ ಹಾಕಿ ಉತ್ಸವ ಮತ್ತಷ್ಟು ದೊಡ್ಡ ಮಟ್ಟದಲ್ಲಿ ನಡೆಯುವಂತಾಗಲಿ ಎಂದು ಹಾರೈಸಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಮಾಜಿ ವಿಧಾನ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ, ಎಂಎಲ್ಸಿ ವೀಣಾ ಅಚ್ಚಯ್ಯ, ಕೊಡಗು ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಪ್ರೊ. ಸಂಗಪ್ಪ ಆಲೂರ, ರಿಜಿಸ್ಟರ್ ಕೆ.ಸುರೇಶ್, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಪದ್ಮಶ್ರೀ ರಾಣಿ ಮಾಚಯ್ಯ, ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಪ್ರಾಂಶುಪಾಲರಾದ ಮೇಜರ್ ಡಾ. ರಾಘವ, ಮುದ್ದಂಡ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಮೊದಲಾದವರು ಉಪಸ್ಥಿತರಿದ್ದರು. ಮುದ್ದಂಡ ಕಪ್ ಹಾಕಿ ಉತ್ಸವ-2025ರ ಪ್ರಶಸ್ತಿ ವಿವರ ನಿನ್ನೆಯಿಂದ (ಮಾರ್ಚ್ 28) ಶುಕ್ರವಾರ ಆರಂಭವಾದ ಮುದ್ದಂಡ ಕಪ್ ಹಾಕಿ ಉತ್ಸವ-2025 ಏಪ್ರಿಲ್ 27ರವರೆಗೆ ನಡೆಯಲಿದೆ. ಸತತ ಒಂದು ತಿಂಗಳು ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಹಾಕಿ ಪಂದ್ಯಾವಳಿಗಳು ನಡೆಯಲಿದೆ. ರಾಜ್ಯ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿರುವ ಈ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಕೊಡವ ಕುಟುಂಬಗಳ ದಾಖಲೆಯ 396 ತಂಡಗಳು ನೋಂದಾಯಿಸಿಕೊಂಡಿವೆ.

ಇನ್ನು ಈ ಬಾರಿಯ ಮುದ್ದಂಡ ಕಪ್ ಹಾಕಿ ಉತ್ಸವ-2025ರ ವಿಜೇತ ತಂಡಕ್ಕೆ 5 ಲಕ್ಷ ರೂಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 3 ಲಕ್ಷ ರೂಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿ, ಸೆಮಿಫೈನಲ್ಗೆ ಬಂದ ಎರಡು ತಂಡಗಳಿಗೆ ತಲಾ 1 ಲಕ್ಷ ರೂಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿ ಬಹುಮಾನವಾಗಿ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಇನ್ನು ಈ ಬಾರಿ ವಿಶೇಷ ಎಂಬಂತೆ ಮಹಿಳಾ ತಂಡಗಳ ನಡುವೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಈಗಾಗಲೇ 40 ತಂಡಗಳು ನೋಂದಾಯಿಸಿಕೊಂಡಿವೆ. ಮಹಿಳಾ ಹಾಕಿ ಪಂದ್ಯಾವಳಿಗೆ ಪ್ರತ್ಯೇಕ ಮೈದಾನ ನಿರ್ಮಿಸಲಾಗಿದೆ. ವಿಜೇತರಾದ ಮಹಿಳಾ ತಂಡಕ್ಕೆ 2 ಲಕ್ಷ ರೂಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 1 ಲಕ್ಷ ರೂಪಾಯಿ ನಗದು ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಇನ್ನು ಪಂದ್ಯಾವಳಿ ಆರಂಭವಾದರೂ ನೋಂದಣಿಯ ಕೊನೆಯ ದಿನಾಂಕ ಏಪ್ರಿಲ್ 10 ಆಗಿರುವುದರಿಂದ ಮತ್ತಷ್ಟು ತಂಡಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ.