ನವದೆಹಲಿ: ಭಾರತವು ಬುಧವಾರ ನಸುಕಿನ ಜಾವವೇ ಅಮೆರಿಕ, ರಷ್ಯಾ, ಯುಕೆ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವು ಪ್ರಮುಖ ದೇಶಗಳನ್ನು ಸಂಪರ್ಕಿಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಸ್ಥಳಗಳ ಮೇಲೆ ನಡೆಸಿದ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತಂತೆ ವಿವರಿಸಿದೆ ಎಂದು ಮೂಲಗಳು ತಿಳಿಸಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ದಾಳಿಗಳನ್ನು ನಡೆಸಲಾಗಿದೆ.
“ಭಾರತ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಲು ಹಿರಿಯ ಭಾರತೀಯ ಅಧಿಕಾರಿಗಳು ಹಲವಾರು ದೇಶಗಳಲ್ಲಿನ ತಮ್ಮ ಸಹವರ್ತಿಗಳೊಂದಿಗೆ ಮಾತನಾಡಿದ್ದಾರೆ” ಎಂದು ಮೂಲವೊಂದು ತಿಳಿಸಿದೆ.

“ಇವುಗಳಲ್ಲಿ ಅಮೆರಿಕ, ಬ್ರಿಟನ್, ಸೌದಿ ಅರೇಬಿಯಾ ಮತ್ತು ರಷ್ಯಾ ಸೇರಿವೆ” ಎಂದು ಅದು ಹೇಳಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದು ಎರಡು ವಾರಗಳ ನಂತರ ಭಾರತವು ಈ ಕ್ರಮ ಕೈಗೊಂಡಿದೆ.
“25 ಭಾರತೀಯರು ಮತ್ತು ಒಬ್ಬ ನೇಪಾಳಿ ನಾಗರಿಕನನ್ನು ಭೀಕರವಾಗಿ ಕೊಂದ ನರರಾಕ್ಷಸರ ಹುಟ್ಟಡಗಿಸಲು ಈ ಕ್ರಮಗಳನ್ನು ಕೈಗೊಳ್ಳಲಾಯಿತು” ಎಂದು ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ಈ ದಾಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂಬ ಮಾತಿಗೆ ನಾವು ಬದ್ಧರಾಗಿದ್ದೇವೆ” ಎಂದು ಅದು ಹೇಳಿದೆ.
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಹಲವು ದಶಕಗಳಿಂದ ಬಿಗುವಿನ ವಾತಾವರಣವಿದ್ದು, ಏನೋ ಒಂದು ದೊಡ್ಡ ಘಟನೆ ನಡೆಯಲಿದೆ ಎಂಬುದು ಜನರಿಗೆ ತಿಳಿದಿತ್ತು ಎಂದು ನಾನು ಭಾವಿಸಿದ್ದೆ ಎಂದು ಭಯೋತ್ಪಾದಕರ ವಿರುದ್ಧದ ಭಾರತದ ಕ್ಷಿಪಣಿ ದಾಳಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಸಂಘರ್ಷ ಆದಷ್ಟು ಬೇಗ ಕೊನೆಗೊಳ್ಳಲಿ ಎಂದಿದ್ದಾರೆ.