ಹಾಸನ : ತಾಳಿ ಕಟ್ಟುವ ಸಮಯಕ್ಕೆ ಸರಿಯಾಗಿ ಮದುವೆಯೊಂದು ಮುರಿದು ಬಿದ್ದ ಘಟನೆ ಹಾಸನದಲ್ಲಿ ನಡೆದಿದೆ. ಮುಹೂರ್ತದ ವೇಳೆ ವಧು, ಮದುವೆ ಬೇಡವೆಂದು ಪಟ್ಟುಹಿಡಿದಿದ್ದರಿಂದ ನಗರದ ಕಲ್ಯಾಣ ಮಂಟಪವೊಂದರಲ್ಲಿ ನಡೆಯುತ್ತಿದ್ದ ಮದುವೆ ಮುರಿದು ಬಿದ್ದಿದೆ.

ಇನ್ನೊಬ್ಬನ ಜೊತೆ ಪ್ರೀತಿಸುತ್ತಿದ್ದು, ಆತನನ್ನೇ ಮದುವೆ ಮಾಡಿಕೊಳ್ಳುವುದಾಗಿ ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ಮದುಮಗಳು ಹೇಳಿದ್ದು, ವರ ಮತ್ತು ವಧುವಿನ ಪಾಲಕರಿಗೆ ದಿಕ್ಕು ತೋಚದಂತಾಗಿತ್ತು.
ಏನಿದು ಪ್ರಕರಣ?: ಹಾಸನದಲ್ಲಿ ಇಂದು ಮದುವೆ ನಿಶ್ಚಯವಾಗಿತ್ತು. ಬೆಳಗ್ಗೆ ನಡೆಯುತ್ತಿದ್ದ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಮಂತ್ರಘೋಷಗಳು, ಗಟ್ಟಿ ಮೇಳ ಮೊಳಗಿತ್ತು. ಇನ್ನೇನು ವರ ತಾಳಿ ಹಿಡಿದು ಕಟ್ಟಲು ಸಜ್ಜಾಗಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ವಧು ನನಗೆ ತಾಳಿ ಕಟ್ಟುವುದು ಬೇಡ, ನಾನು ಇನ್ನೊಬ್ಬನ ಜೊತೆ ಪ್ರೀತಿಸುತ್ತಿದ್ದು, ಆತನನ್ನೇ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ವಧುವಿನ ಈ ಮಾತಿನಿಂದ ದಿಕ್ಕುತೋಚದ ವರ, ತಾಳಿ ಕಟ್ಟಲು ನಿರಾಕರಿಸಿದ್ದಾರೆ.
ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಹಾಗಾಗಿ ನನಗೆ ಧೈರ್ವಿಲ್ಲದೇ ಇಷ್ಟು ದಿನ ನಿಮ್ಮ ಮುಂದೆ ಹೇಳಲು ಸಾಧ್ಯವಾಗಿರಲಿಲ್ಲ. ದಯಮಾಡಿ ನನಗೆ ಈ ಮದುವೆ ಮಾಡಿ ನನ್ನ ಭವಿಷ್ಯವನ್ನು ಹಾಳು ಮಾಡಬೇಡಿ ಎಂದು ಪೋಷಕರಿಗೆ ಹೇಳುತ್ತಲೇ ಅಳುತ್ತ ರೂಮಿನ ಬಾಗಿಲು ಹಾಕಿಕೊಂಡು ಹಠ ಹಿಡಿದಿದ್ದಾಳೆ.
ವಧುವಿನ ಮನವೊಲಿಸಲು ನಡೆಸಿದ ಕಸರತ್ತೂ ವ್ಯರ್ಥ: ವಧುವನ್ನು ಮನವೊಲಿಸಲು ಆಕೆಯ ಪೋಷಕರು ಶತಾಯಗತಾಯ ಪ್ರಯತ್ನಪಟ್ಟು ಕೊನೆಗೆ ಕೈಚೆಲ್ಲಿದ್ದಾರೆ. ಇನ್ನು ಮದುವೆ ಆಗಲು ಸಿದ್ದನಿದ್ದ, ಹುಡುಗ ಕೂಡ ನನಗೆ ಮದುವೆ ಬೇಡ ಎನ್ನುವ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾನೆ.
ಕೆಲ ಕಾಲ ಮದುವೆ ಮಂಟಪದಲ್ಲಿ ಗೊಂದಲ; ಇದರಿಂದ ಮದುವೆ ಮಂಟಪದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಮದುವೆ ಊಟ ಮುಗಿಸಿ ರಿಸೆಪ್ಶನ್ಗೆ ಕಾಯುತ್ತಿದ್ದ ಬಂದು – ಮಿತ್ರರು ತಾವು ತಂದಿದ್ದ ಉಡುಗೊರೆ ಜೊತೆ ವಾಪಸ್ ಆದರು. ಪ್ರಕರಣ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಡಾವಣಾ ಪೊಲೀಸರು, ವಧುವನ್ನು ಠಾಣೆಗೆ ಕರೆದುಕೊಂಡು ಹೋದರು. ಇತ್ತೀಚೆಗಷ್ಟೇ ಪದವಿ ಮುಗಿಸಿದ್ದ ವಧುವಿನ ಪೋಷಕರು ಆಕೆಯ ಒಪ್ಪಿಗೆ ಮೇರೆಗೆ ಈ ಮದುವೆ ನಿಶ್ಚಯಿಸಿದ್ದರು.