ಬೆಂಗಳೂರು: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಸುತ್ತಿಕೊಂಡಿರುವ ನ್ಯಾಷನಲ್ ಹೆರಾಲ್ಡ್ ಕೇಸ್ನಲ್ಲಿ ಇದೀಗ ಕರ್ನಾಟಕ ಕಾಂಗ್ರೆಸ್ ನಾಯಕರಾದ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ ಹೆಸರು ಕೂಡ ಕೇಳಿಬಂದಿದೆ. ಈ ಬಗ್ಗೆ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ನ್ಯಾಷನಲ್ ಹೆರಾಲ್ಡ್ ನಮ್ಮ ಪಕ್ಷ ನಡೆಸುವ ಪತ್ರಿಕೆ. ಅದಕ್ಕೆ ನಾನು ಹಾಗೂ ಸಹೋದರ ಸುರೇಶ್ 25 ಲಕ್ಷ ರೂಪಾಯಿ ಹಣ ನೀಡಿದ್ದೇವೆ. ನಮ್ಮ ಟ್ರಸ್ಟ್ನಿಂದಲೂ ದೇಣಿಗೆ ನೀಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಯಂಗ್ ಇಂಡಿಯಾಗೆ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಕೋಟಿಗಟ್ಟಲೆ ಹಣ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ. ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಕೇಸ್ ಸಂಬಂಧ ಕೋರ್ಟ್ಗೆ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಸಿದ್ದು, ಇದರಲ್ಲಿ ಡಿಕೆ ಸಹೋದರರ ಹೆಸರು ಕೂಡ ಉಲ್ಲೇಖವಾಗಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೂಡ ಇದಕ್ಕೆ ದೇಣಿಗೆ ನೀಡಿದ್ದು, ಹೈಕಮಾಂಡ್ ಸೂಚನೆ ಮೇರೆಗೆ ದೇಣಿಗೆ ನೀಡಿರುವುದಾಗಿ ಇಡಿ ಗಂಭೀರವಾಗಿ ಆರೋಪಿಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಕೆ ಶಿವಕುಮಾರ್, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಮ್ಮ ಪಕ್ಷದ್ದು. ಪಕ್ಷದ ಪತ್ರಿಕೆಗೆ ನಾವು ಫಂಡ್ ಕೊಟ್ಟಿದ್ದೇವೆ. ಹಣ ಕೊಟ್ಟರೆ ತಪ್ಪೇನು? ಎಂದು ಕೇಳಿದ್ದಾರೆ. ನಾವೇನು ಕದ್ದು ಮುಚ್ಚಿ ಹಣ ನೀಡಿಲ್ಲ, ಸಂಪಾದನೆ ಮಾಡಿರುವ ಹಣ ಕೊಟ್ಟಿದ್ದೇವೆ. ಯಾಕೆ ಕೊಡಬಾರದೇ? ಎಂದಿದ್ದಾರೆ. ಏನಿದು ಪ್ರಕರಣ? ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹೆಸರಿನಲ್ಲಿ ನಡೆದ ಅವ್ಯವಹಾರ ಸಂಬಂಧ 2010ರಲ್ಲಿ ಈಗಿನ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ನೀಡಿದ ಕ್ರಿಮಿನಲ್ ದೂರು ಆಧರಿಸಿ ಕೇಸ್ ದಾಖಲಾಗಿತ್ತು. 1938ರಲ್ಲಿ ಜವಾಹರಲಾಲ್ ನೆಹರೂ ಹುಟ್ಟುಹಾಕಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಷಿಯೇಟೆಡ್ ಜರ್ನಲ್ಸ್ ಲಿ (ಎಜೆಎಲ್) ಸಂಸ್ಥೆ ಮುದ್ರಿಸುತ್ತಿತ್ತು. ಆಗ ಐದು ಸಾವಿರ ಸ್ವಾತಂತ್ರ್ಯ ಹೋರಾಟಗಾರರು ಈ ಎಜೆಎಲ್ನ ಷೇರುದಾರರಾಗಿದ್ದರು. ಆಗ ಕಂಪನಿ ಯಾರೊಬ್ಬ ವ್ಯಕ್ತಿಯ ಮಾಲಕತ್ವದಲ್ಲಿ ಇರಲಿಲ್ಲ. ಆರ್ಥಿಕ ಪರಿಸ್ಥಿತಿಯಿಂದ ಈ ಮೂರು ಪತ್ರಿಕೆಗಳ ಮುದ್ರಣ ನಿಲ್ಲಿಸಲಾಗಿತ್ತು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಎಜೆಎಲ್ ಮುದ್ರಿಸಿದರೆ, ಯಂಗ್ ಇಂಡಿಯಾ ಕಂಪನಿ ಎಜೆಎಲ್ನ ಒಡೆತನ ಹೊಂದಿತ್ತು. ಯಂಗ್ ಇಂಡಿಯಾ 2010ರಲ್ಲಿ ಸ್ಥಾಪನೆಯಾಗಿದ್ದ ಯಂಗ್ ಇಂಡಿಯಾದಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಪಾಲು ಶೇ.7.6ರಷ್ಟಿದೆ. 2010ರ ಡಿಸೆಂಬರ್ 16ರಂದು ಎಜೆಎಲ್ ಸುಮಾರು 90.1 ಕೋಟಿ ರೂ ಸಾಲ ಹೊಂದಿತ್ತು. ಆಗ ಕಾಂಗ್ರೆಸ್ ಪಕ್ಷ 90.25 ಕೋಟಿ ರೂ ಸಾಲವನ್ನು ಎಜೆಎಲ್ಗೆ ನೀಡಿತು. ಅದರೆ, ಈ ಹಣ ವಸೂಲಿ ಮಾಡುವ ಅಧಿಕಾರವನ್ನು ಯಂಗ್ ಇಂಡಿಯಾಗೆ ನೀಡಿತ್ತು. ಬಳಿಕ ಎಜೆಎಲ್ನ ಶೇ.99ರಷ್ಟು ಷೇರುಗಳು ಯಂಗ್ ಇಂಡಿಯಾಗೆ ವರ್ಗಾವಣೆ ಆದವು.
ಸುಬ್ರಮಣಿಯನ್ ಸ್ವಾಮಿ 2012ರಲ್ಲಿ ನ್ಯಾಷನಲ್ ಹೆರಾಲ್ಡ್ ಹಗರಣ ಸಂಬಂಧ ಕ್ರಿಮಿನಲ್ ದೂರು ದಾಖಲಿಸಿದ್ದರು. ಅಕ್ರಮವಾಗಿ ಎಜೆಎಲ್ ಅನ್ನು ಖರೀದಿ ಮಾಡಲಾಗಿದೆ. ಅಕ್ರಮವಾಗಿ ಷೇರುಗಳನ್ನು ವರ್ಗಾಯಿಸಲಾಗಿದೆ. ಅಕ್ರಮವಾಗಿ ಜಮೀನು ಹೊಂದಲಾಗಿದೆ ಎಂದು ತಮ್ಮ ದೂರಿನಲ್ಲಿ ಅರೋಪಿಸಿದ್ದರು. ಮೊದಲಿಗೆ ಸಿಬಿಐ ತನಿಖೆ ನಡೆಸಿತು. ಇದರಲ್ಲಿ ಹಣಕಾಸು ಅಕ್ರಮ ಆರೋಪ ಕೇಳಿಬಂದಿದ್ದರಿಂದ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿತ್ತು.