ಕೋಮು ಹಿಂಸೆ ಹತ್ತಿಕ್ಕಲು ಮುಲಾಜಿಲ್ಲದೇ ಕ್ರಮ -ಗೃಹ ಸಚಿವ Parameshwara  ಹೇಳಿಕೆ

ಕೋಮು ಹಿಂಸೆ ಹತ್ತಿಕ್ಕಲು ಮುಲಾಜಿಲ್ಲದೇ ಕ್ರಮ -ಗೃಹ ಸಚಿವ Parameshwara  ಹೇಳಿಕೆ

ಬೆಂಗಳೂರು:  ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಸೂಕ್ಷ್ಮ ಪ್ರದೇಶಗಳಾಗಿ ಪರಿಗಣಿಸಿ, ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯಾವುದೇ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರತಿಸಾರಿ ಈರೀತಿ ಆಗುತ್ತಿದ್ದರೆ ಸುಮ್ಮನೆ ಕೂರಲು ಆಗುವುದಿಲ್ಲ. ಕಾನೂನನ್ನು ಮತ್ತಷ್ಟು ಬಿಗಿ ಮಾಡುತ್ತೇವೆ ಎಂದರು.

ಕಳೆದ ಬಾರಿ ಘಟನೆ ನಡೆದಾಗ ಪರಿಸ್ಥಿತಿ ಅರ್ಥೈಸಿಕೊಂಡು, ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚಿಸಲು ಪರಿಶೀಲನೆ ಮಾಡಿ, ತಕ್ಷಣ ಜಾರಿಗೆ ಬರುವ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಕ್ರಮ ತೆಗೆದುಕೊಳ್ಳುತ್ತಾರೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳನ್ನು  ಸೂಕ್ಷ್ಮ ಪ್ರದೇಶಗಳಾಗಿ ಪರಿಗಣಿಸುತ್ತೇವೆ. ಕೋಮು ಹಿಂಸೆಯನ್ನು ಹತ್ತಿಕ್ಕಲು, ಸರ್ಕಾರ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ನಕ್ಸಲ್ ನಿಗ್ರಹ ಕಾರ್ಯಪಡೆಯಲ್ಲಿನ ಅರ್ಧ ಸಿಬ್ಬಂದಿಗಳನ್ನು ಕೋಮು ಹಿಂಸೆ ನಿಗ್ರಹ ಪಡೆಗೆ ನಿಯೋಜಿಸಲಾಗುವುದು. ಅವರಿಗೆ ಅಗತ್ಯ ಅಧಿಕಾರ, ಸವಲತ್ತುಗಳನ್ನು ನೀಡುತ್ತೇವೆ. ಮೂರು ಜಿಲ್ಲೆಗಳಲ್ಲಿ ಹೆಚ್ಚು ಗಮನ ಹರಿಸುತ್ತೇವೆ ಎಂದು ಹೇಳಿದರು.

ದ್ವೇಷ ಭಾವನೆ ಬಂದರೆ ಸಮಾಜ ಎಲ್ಲಿ ಉಳಿಯುತ್ತದೆ. ಜನರು ಅಲ್ಲಿ ಜೀವನ ಮಾಡಲು ಆಗುತ್ತದೆಯೇ? ಇದನ್ನು ಸರ್ಕಾರ ನೋಡಿಕೊಂಡು ಸುಮ್ಮನೆ ಇರುವುದಿಲ್ಲ ಎಂದರು.

ಮಂಗಳೂರಿನಲ್ಲಿ ನಡೆದ ಯುವಕನ ಹತ್ಯೆ ಪ್ರಕರಣದ ತನಿಖೆಯಲ್ಲಿ ಗಂಭೀರವಾದ ಮಾಹಿತಿ ಸಿಕ್ಕಿದೆ. ಅದರ ಆಧಾರದ ಮೇಲೆಕ್ರಮ ತೆಗೆದುಕೊಳ್ಳುತ್ತೇವೆ. ಜನಪ್ರತಿನಿಧಿಗಳು ಶಾಂತಿ ನೆಲೆಸುವ ನಿಟ್ಟಿನಲ್ಲಿ ಸಹಕಾರ ಮಾಡಬೇಕು. ಪ್ರಚೋದನೆ ಮಾಡಲು ಹೋದರೆ ನಿಲ್ಲಿಅಲು ಹೇಗೆ ಸಾಧ್ಯ. ಧಾರ್ಮಿಕ ಮುಖಂಡರೊಂದಿಗೆ ಶಾಂತಿ ಸಭೆಗಳನ್ನು ಮಾಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *