ಸೀ ಬರ್ಡ್ ಬಸ್ ಚಾಲಕ ಮದ್ಯಪಾನ ಮಾಡಿ ಚಾಲನೆ.
ಬೆಂಗಳೂರು : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ನಡೆದ ಸೀ ಬರ್ಡ್ ಬಸ್ ದುರಂತದ ಬೆನ್ನಲ್ಲೇ, ಅದೇ ಕಂಪನಿಯ ಮತ್ತೊಬ್ಬ ಚಾಲಕನ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಆತಂಕ ಮೂಡಿಸುವಂತಹ ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಿಂದ ಗೋವಾಕ್ಕೆ ಹೊರಟಿದ್ದ ಖಾಸಗಿ ಸೀ ಬರ್ಡ್ ಬಸ್ ಅನ್ನು ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದ ಚಾಲಕ, ಉಪ್ಪಾರಪೇಟೆ ಸಂಚಾರಿ ಪೊಲೀಸರ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ತೀವ್ರ ತಪಾಸಣೆ ನಡೆಯುತ್ತಿದ್ದ ವೇಳೆ, ಅನುಮಾನಾಸ್ಪದವಾಗಿ ಬಸ್ ತಡೆಯಲಾಯಿತು. ತಪಾಸಣೆಯಲ್ಲಿ ಚಾಲಕ ಮದ್ಯಪಾನ ಮಾಡಿರುವುದು ದೃಢಪಟ್ಟ ಕೂಡಲೇ, ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡರು.
ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ ಪೊಲೀಸರು, ತಕ್ಷಣವೇ ಬೇರೆ ಚಾಲಕನ ವ್ಯವಸ್ಥೆ ಮಾಡಿ ಬಸ್ ಅನ್ನು ಗೋವಾಕ್ಕೆ ಕಳುಹಿಸಿದರು. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಖಾಸಗಿ ಬಸ್ಗಳ ಮೇಲಿನ ನಿಗಾವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಡಿಸೆಂಬರ್ 25ರ ನಸುಕಿನಲ್ಲಿ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಸೀ ಬರ್ಡ್ ಬಸ್ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಎದುರುಬದಿಯಿಂದ ಬರುತ್ತಿದ್ದ ಕಂಟೇನರ್ ಲಾರಿ ಡಿವೈಡರ್ ಹಾರಿ ಬಸ್‌ಗೆ ಗುದ್ದಿದ ಪರಿಣಾಮ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿತ್ತು. ಈ ಭೀಕರ ದುರಂತದ ಕಹಿ ನೆನಪು ಇನ್ನೂ ಮಾಸುವ ಮುನ್ನವೇ ಅದೇ ಕಂಪನಿಯ ಬಸ್ ಚಾಲಕ ನಿರ್ಲಕ್ಷ್ಯದ ಚಾಲನೆ ಮಾಡಿದ್ದು ಬೆಳಕಿಗೆ ಬಂದಿರುವುದು ಆತಂಕ ಹೆಚ್ಚಿಸಿದೆ.
For More Updates Join our WhatsApp Group :




