ಧಾರವಾಡ : ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಹುಬ್ಬಳ್ಳಿ ಧಾರವಾಡ ಕಾರಿಡಾಡ್ನಲ್ಲಿ ಎಲೆಕ್ಟ್ರಿಕ್ ರ್ಯಪಿಡ್ ಟ್ರಾನ್ಸಿಟ್ (ಇ.ಆರ್.ಟಿ) ಸೌಲಭ್ಯ ಆರಂಭಿಸಲು ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದು, ಉತ್ತಮ ಯೋಜನಾ ವರದಿ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.

ನಗರದ ಸೃಜನಾ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಹುಬ್ಬಳ್ಳಿ-ಧಾರವಾಡ ಕಾರಿಡಾರ್ನಲ್ಲಿ ಇ.ಆರ್.ಟಿ. ಸಾರಿಗೆ ವ್ಯವಸ್ಥೆ ಕುರಿತು ಸಾರ್ವಜನಿಕರು ಮತ್ತು ಭಾಗೀದಾರರ ಸಭೆಯಲ್ಲಿ ಮಾತನಾಡಿದರು.
ಹುಬ್ಬಳ್ಳಿ- ಧಾರವಾಡ ಕಾರಿಡಾರ್ ನಲ್ಲಿ ಎಲೆಕ್ಟ್ರಿಕ್ ರ್ಯಾಪಿಡ್ ಟ್ರಾನ್ಸಿಟ್ ಇ.ಆರ್.ಟಿ. ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ಮತ್ತು ಖಾಸಗಿ ,ಪಿಪಿಪಿ ಮಾಡಲ್ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ವ್ಯವಸ್ಥೆಯನ್ನು ಜಾರಿಗೊಳಿಸಲು ವಿಸೃತ ಯೋಜನಾ ವರದಿ (ಡಿಪಿಆರ್)ಯನ್ನು ಸಿದ್ಧಗೊಳ್ಳಿಸಲಾಗುತ್ತಿದೆ. ಸರ್ಕಾರವು 3 ತಿಂಗಳ ಕಾಲಾವಕಾಶ ನೀಡಿದ್ದು, ಈಗಾಗಲೇ ಒಂದು ತಿಂಗಳ ಅಧ್ಯಯನ ನಡೆಸಲಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ಅಂತಿಮ ವಿಸೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಂಸ್ಥೆಯು ಸಲ್ಲಿಸಲಿದೆ ಎಂದು ಹೇಳಿದರು.
ಸಭೆಯಲ್ಲಿ ವಿಧಾನ ಪರಿಷತ್ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಹಾಗೂ ವಿವಿಧ ಪ್ರತಿನಿಧಿಗಳು, ಸಾರ್ವಜನಿಕರು ಮಾತನಾಡಿ, ತಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳ ಜೊತೆಗೆ ಮನವಿಗಳನ್ನು ಸಲ್ಲಿಸಿದರು.
