ಬೆಂಗಳೂರು: “ಚನ್ನಪಟ್ಟಣ ಕ್ಷೇತ್ರದಿಂದ ಡಿ.ಕೆ. ಶಿವಕುಮಾರ್ ಸ್ಪರ್ಧೆ ಮಾಡಿದರೆ ರಾಜಕೀಯ ಅಂತ್ಯ” ಎನ್ನುವ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ “ನನ್ನ ರಾಜಕೀಯ ಅಂತ್ಯ ತಿರ್ಮಾನ ಮಾಡುವುದು ಜನರು. ಅವರು ನೋಡಿಕೊಳ್ಳುತ್ತಾರೆ” ಎಂದು ತಿರುಗೇಟು ನೀಡಿದ್ದಾರೆ
ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ದೊಡ್ಡವರಿಗೆಲ್ಲ ನಾನು ಮಾತನಾಡಲು ಹೋಗಲ್ಲ, ನನಗೆ ಸಮಯವಿಲ್ಲ. ನನಗೆ ಶಕ್ತಿ ಕೊಡಿ ಅಂತ ನಾನು ಮತದಾರರಿಗೆ ಕೇಳಿಕೊಂಡಿದ್ದೇನೆ. ನನ್ನ ಹಿಂದೆ ಒಂದು ಶಕ್ತಿ ಇದೆ. ಜನ ಇದ್ದಾರೆ. ಅವರು ನೋಡಿಕೊಳ್ಳುತ್ತಾರೆ. ನನ್ನ ಅಂತ್ಯ ಬರೆಯುವವರು ಜನರು. ವಿಶ್ವಾಸ ಇದ್ದರೆ ಮತ ಹಾಕುತ್ತಾರೆ” ಎಂದು ಹೇಳಿದರು.
ಮುಂದುವರೆದು, ಕನಕಪುರದಲ್ಲಿ ಉಪ ಚುನಾವಣೆ ಬಂದರೆ ದೇಶದ ಸಂಪತ್ತು ಹಾಳಾಗುತ್ತದೆ ಎನ್ನುವ ಶಾಸಕ ಸುರೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ “ನಾನು ಕನಕಪುರದ ಎಂಎಲ್ಎ, ಪಕ್ಷದ ಅಧ್ಯಕ್ಷ ಸಹ ‘ನನಗೂ ಜವಾಬ್ದಾರಿ ಇದೆ’. ಎಲ್ಲಾ ನನ್ನದೇ ಕ್ಷೇತ್ರ, ನನ್ನದೇ ನಾಯಕತ್ವ. ನಾನು, ಸಿಎಂ ಸಿದ್ದರಾಮಯ್ಯ ಜೊತೆಗೂಡಿ ಎಲೆಕ್ಷನ್ ಮಾಡುತ್ತೇವೆ” ಎಂದರು