ನವದೆಹಲಿ: ಅಮೆರಿಕಾ ಪ್ರವಾಸದಲ್ಲಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಭಾರತದ ವಿರುದ್ಧ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಜೊತೆಗೆ ವಿಶ್ವಕ್ಕೇ ಅಣು ದಾಳಿಯ ಬೆದರಿಕೆ ಹಾಕಿದ್ದಾರೆ. ಪಾಕ್ ಸೇನಾಧ್ಯಕ್ಷನ ಹೇಳಿಕೆಗೆ ಭಾರತ ತೀಕ್ಷ್ಣ ತಿರುಗೇಟು ನೀಡಿದೆ.
ಪಾಕಿಸ್ತಾನ ವಿರುದ್ಧ ದಾಳಿ ನಡೆಸಿದಲ್ಲಿ ಭಾರತದ ಮೇಲೆ ನಾವು ಅಣು ಬಾಂಬ್ ದಾಳಿ ನಡೆಸುತ್ತೇವೆ ಎಂದು ಅಮೆರಿಕದಲ್ಲಿದ್ದುಕೊಂಡು ಮುನೀರ್ ಹೇಳಿಕೆ ನೀಡಿದ್ದಾನೆ. ಇದು ಉನ್ಮಾದದಲ್ಲಿರುವ ದೇಶವೊಂದರ ನಡವಳಿಕೆ. ಅಮೆರಿಕದ ಬೆಂಬಲ ಇದೆ ಎಂದು ಪಾಕ್ ಗುಟುರು ಹಾಕುತ್ತಿದೆ ಎಂದು ಭಾರತ ಎದಿರೇಟು ನೀಡಿದೆ.
ಮುನೀರ್ ಉದ್ದಟತನದ ಹೇಳಿಕೆಗಳಿವು : ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮುನೀರ್, ಪಾಕಿಸ್ತಾನ ಪರಮಾಣು ಸಾಮರ್ಥ್ಯದ ದೇಶವಾಗಿದ್ದು, ಭಾರತವು ನಮ್ಮ ಅಸ್ತಿತ್ವಕ್ಕೆ ಬೆದರಿಕೆ ಹಾಕಿದರೆ, ಅದೂ (ಭಾರತ) ಸೇರಿದಂತೆ ಅರ್ಧ ಪ್ರಪಂಚವನ್ನೇ ನಾಶಪಡಿಸುವ ಶಕ್ತಿ ನಮ್ಮಲ್ಲಿದೆ ಎಂದು ನಾಲಿಗೆ ಹರಿಬಿಟ್ಟಿದ್ದಾನೆ.
ಭಾರತ ತಿರುಗೇಟು: ಈ ಕುರಿತಾಗಿ ವಿದೇಶಾಂಗ ಸಚಿವಾಲಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, “ದೇಶದ ಭದ್ರತೆ ಸಲುವಾಗಿ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಭಾರತ ಹಿಂದೇಟು ಹಾಕುವುದಿಲ್ಲ. ಪಾಕಿಸ್ತಾನದ ಅಣು ಬೆದರಿಕೆಗಳು ಹೊಸದೇನಲ್ಲ. ಇಂತಹ ಹೇಳಿಕೆಗಳು ಆ ದೇಶದ ಉನ್ಮಾದ ಮತ್ತು ಉದ್ದಟತನ ಸ್ವಭಾವವನ್ನು ತೋರಿಸುತ್ತದೆ. ಪಾಕಿಸ್ತಾನ ಸೇನೆ ಉಗ್ರರೊಂದಿಗೆ ಕೈಜೋಡಿಸಿದೆ ಎಂಬುದಕ್ಕೆ ಇದೇ ಸಾಕ್ಷಿ” ಎಂದು ಹೇಳಿದೆ.
ಇದಕ್ಕೂ ಮೊದಲು, ಕೇಂದ್ರ ಸರ್ಕಾರದ ಉನ್ನತ ಮಟ್ಟದ ಮೂಲಗಳು ಪಾಕ್ ಸೇನಾಧಿಕಾರಿಯ ಹೇಳಿಕೆಗೆ ಪ್ರತಿಕ್ರಿಯಿಸಿವೆ. “ಅಮೆರಿಕವು ಪಾಕಿಸ್ತಾನಿ ಮಿಲಿಟರಿಯನ್ನು ಬೆಂಬಲಿಸಿದಾಗಲೆಲ್ಲಾ, ಅವರು ತಮ್ಮ ನಿಜವಾದ ಬಣ್ಣವನ್ನು ಹೊರಗೆಡುವುತ್ತಾರೆ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ದೇಶವು ಸೈನ್ಯದಿಂದ ನಿಯಂತ್ರಿಸಲ್ಪಡುತ್ತದೆ. ಪಾಕಿಸ್ತಾನದಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳು ಭಯೋತ್ಪಾದಕರ ಕೈಗೆ ಸೇರುವ ಅಪಾಯವಿದೆ. ಅದು ಸಂಭವಿಸಿದಲ್ಲಿ, ಆ ದೇಶ ಸೇರಿದಂತೆ ಇಡೀ ಜಗತ್ತೇ ನಾಶಕ್ಕೆ ಸಿಲುಕಲಿದೆ” ಎಂದು ಎಚ್ಚರಿಸಿವೆ.