ಕರ್ನಾಟಕದ ಮೊದಲ ಮಕ್ಕಳಿಗೆ ಮೀಸಲಾದ ಲಿವರ್ (ಯಕೃತ್ತು) ಐಸಿಯು
ಬೆಂಗಳೂರು: ಮಕ್ಕಳ ತೀವ್ರ ನಿಗಾ ಆರೈಕೆ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿರುವ ಅಸ್ಟರ್ ಸಿಎಂಐ ಆಸ್ಪತ್ರೆ, ಇಂದು ‘PEARL’ (Pediatric Emergency and Advanced Response for Liver Care) ಅನ್ನು ಲೋಕಾರ್ಪಣೆಗೊಳಿಸಿದೆ. ಇದು ಕರ್ನಾಟಕದ ಮೊದಲ ಮಕ್ಕಳಿಗೆ ಮೀಸಲಾದ ಯಕೃತ್ತು ತೀವ್ರ ನಿಗಾ ಘಟಕ (ICU) ಆಗಿದೆ.
ಗಂಭೀರ ಮತ್ತು ಪ್ರಾಣಾಪಾಯವಿರುವ ಯಕೃತ್ತಿನ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷವಾಗಿ ಅತ್ಯಂತ ಕೇಂದ್ರೀಕೃತ, ಸಮಯೋಚಿತ ಮತ್ತು ಸುಧಾರಿತ ವೈದ್ಯಕೀಯ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗಿದೆ. ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಅಸ್ಟರ್ ಸಿಎಂಐ ಆಸ್ಪತ್ರೆಯ ಹಿರಿಯ ಆಡಳಿತಾಧಿಕಾರಿಗಳು ಮತ್ತು ವೈದ್ಯಕೀಯ ತಜ್ಞರ ಸಮ್ಮುಖದಲ್ಲಿ ಈ ಘಟಕವನ್ನು ಉದ್ಘಾಟಿಸಿದರು.
ಕರ್ನಾಟಕದ ಅಸ್ಟರ್ ಸಿಎಂಐ ಹೆಪಟೊಬಿಲಿಯರಿ ಸರ್ಜರಿ ಮತ್ತು ಬಹು-ಅಂಗಾಂಗ ಕಸಿ ವಿಭಾಗದ ಕಾರ್ಯಕ್ರಮ ನಿರ್ದೇಶಕರಾದ ಡಾ. ಸೋನಲ್ ಅಸ್ತಾನಾ ಮಾತನಾಡಿ, “ಅಸ್ಟರ್ ಇಂಟಿಗ್ರೇಟೆಡ್ ಲಿವರ್ ಕೇರ್ ತಂಡ, ಕರ್ನಾಟಕದ ಅತಿದೊಡ್ಡ ಯಕೃತ್ತು ಚಿಕಿತ್ಸೆ ಮತ್ತು ಕಸಿ ನಡೆಸುವ ಸಂಸ್ಥೆಯಾಗಿದ್ದು, ವಾರ್ಷಿಕವಾಗಿ 7,000 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ನಾವು ಬೆಂಗಳೂರಿನಲ್ಲಿ ವಾರ್ಷಿಕ 100 ಕ್ಕೂ ಹೆಚ್ಚು ಯಕೃತ್ತು ಕಸಿ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತೇವೆ. ಅದರಲ್ಲಿ ಗಣನೀಯ ಪ್ರಮಾಣ, ಮಕ್ಕಳ ಯಕೃತ್ತು ವೈಫಲ್ಯಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಆರ್ಥಿಕವಾಗಿ ಹಿಂದುಳಿದ ಅನೇಕ ಮಕ್ಕಳಿಗೆ ಹೊಸ ‘ಅಫೋರ್ಡಬಲ್ ಲಿವರ್ ಟ್ರಾನ್ಸ್‌ಪ್ಲಾಂಟ್’ ಯೋಜನೆಯಡಿ ಜೀವ ಉಳಿಸುವ ಕಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರತ್ಯೇಕ ಐಸಿಯುವಿನ ಆರಂಭ, ಅಸ್ವಸ್ಥ ಮಕ್ಕಳಿಗೆ ವಿಶ್ವದರ್ಜೆಯ ಚಿಕಿತ್ಸೆ ನೀಡುವ ನಮ್ಮ ಬದ್ಧತೆಯನ್ನು ಎತ್ತಿ ತೋರಿಸುತ್ತದೆ” ಎಂದರು.
ಈ ಅತ್ಯಾಧುನಿಕ ಐಸಿಯು ಮೂಲಕ ಅಸ್ಟರ್ ಸಿಎಂಐ ಆಸ್ಪತ್ರೆ, ವೈದ್ಯಕೀಯ ಪರಿಣತಿ, ಸುಧಾರಿತ ತಂತ್ರಜ್ಞಾನ ಮತ್ತು ಮಾನವೀಯ ಕಾಳಜಿಯ ಸಂಯೋಜನೆಯೊಂದಿಗೆ, ಮಕ್ಕಳ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.
For More Updates Join our WhatsApp Group :




