ರವಿ ಗೌಡ ಹಾಗೂ ವಿಜೇತಾ ಜೋಡಿಯಾಗಿ ನಟಿಸಿರುವ ‘ಐ ಆ್ಯಮ್ ಗಾಡ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಜನೀಶ್ ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಜಿತಿನ್ ದಾಸ್ ಅವರು ಛಾಯಾಗ್ರಹಣ ಮಾಡಿದ್ದಾರೆ. ನವೆಂಬರ್ 7ರಂದು ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈಗ ಟ್ರೇಲರ್ ಮೂಲಕ ಕುತೂಹಲ ಮೂಡಿಸಲಾಗಿದೆ.
‘ಐ ಆ್ಯಮ್ ಗಾಡ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಇದು ಉಪೇಂದ್ರ ಅವರ ಶಿಷ್ಯ ರವಿ ಗೌಡ ನಿರ್ದೇಶಿಸಿ, ನಟಿಸಿ, ನಿರ್ಮಾಣ ಮಾಡಿರುವ ಸಿನಿಮಾ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಟ್ರೇಲರ್ ಬಿಡುಗಡೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು. ಈಗಾಗಲೇ ಈ ಸಿನಿಮಾದ 2 ಹಾಡುಗಳು ಹಿಟ್ ಆಗಿವೆ. ಈಗ ಟ್ರೇಲರ್ ಮೂಲಕ ಗಮನ ಸೆಳೆಯಲಾಗಿದೆ. ‘ಐ ಆ್ಯಮ್ ಗಾಡ್’ ಚಿತ್ರದಲ್ಲಿ ಲವ್ ಸ್ಟೋರಿ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಹಾನಿ ಇದೆ.
‘ಐ ಆ್ಯಮ್ ಗಾಡ್’ ಎಂಬ ಡೈಲಾಗ್ ಕೇಳಿದರೆ ಉಪೇಂದ್ರ ಅವರೇ ನೆನಪಾಗುತ್ತಾರೆ. ‘ಎ’ ಸಿನಿಮಾ ಆ ಡೈಲಾಗ್ ಅಷ್ಟು ಫೇಮಸ್. ರವಿ ಗೌಡ ಅವರು ಉಪೇಂದ್ರರ ಗರಡಿಯಲ್ಲಿ ಸಿನಿಮಾದ ಪಾಠಗಳನ್ನು ಕಲಿತವರು. ಉಪೇಂದ್ರ ಜೊತೆ ‘ಉಪ್ಪಿ 2’ ಸಿನಿಮಾದಲ್ಲಿ ಕೆಲಸ ಮಾಡಿ ಅವರು ಅನುಭವ ಪಡೆದರು. ಈಗ ‘ಐ ಆ್ಯಮ್ ಗಾಡ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಉಪೇಂದ್ರ ಅವರಿಗೆ ‘ಐ ಆ್ಯಮ್ ಗಾಡ್’ ಸಿನಿಮಾದ ಟ್ರೇಲರ್ ಇಷ್ಟ ಆಗಿದೆ. ಟ್ರೇಲರ್ ಬಿಡುಗಡೆ ಬಳಿಕ ಅವರು ಮಾತನಾಡಿ, ತಮ್ಮ ಶಿಷ್ಯನ ಸಿನಿಮಾ ಪ್ರೀತಿಯನ್ನು ಶ್ಲಾಘಿಸಿದರು. ‘ಉಪ್ಪಿ 2’ ಸಿನಿಮಾದ ಸಂದರ್ಭದಲ್ಲಿ ರವಿ ಗೌಡ ಬಹಳ ಆಸಕ್ತಿಯಿಂದ ಸಿನಿಮಾದ ಕೆಲಸಗಳನ್ನು ಕಲಿಯುತ್ತಿದ್ದರು ಎಂಬುದನ್ನು ಉಪೇಂದ್ರ ನೆನಪು ಮಾಡಿಕೊಂಡರು.
For More Updates Join our WhatsApp Group :




