ವುಮೆನ್ಸ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಮುಖ್ಯ ಕೋಚ್ ಬದಲಾಗಿದ್ದಾರೆ. ಕಳೆದ ಬಾರಿ ಆರ್ಸಿಬಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಲ್ಯೂಕ್ ವಿಲಿಯಮ್ಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಬದಲಿಗೆ ಮಲೋಲನ್ ರಂಗರಾಜನ್ ಅವರು ಹೊಸ ಕೋಚ್ ಆಗಿ ನೇಮಕವಾಗಿದ್ದಾರೆ.
ಮಲೋಲನ್ ರಂಗರಾಜನ್ ಈ ಹಿಂದೆ ಆರ್ಸಿಬಿ ಫ್ರಾಂಚೈಸಿಯ ಸ್ಕೌಟಿಂಗ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ನೆವಿಸ್ ಪ್ಯಾಟ್ರಿಯಾಟ್ಸ್ ತಂಡದ ಸಹಾಯಕ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮುಖ್ಯ ಕೋಚ್ ಆಗಿ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ಇನ್ನು ಮಲೋಲನ್ ರಂಗರಾಜನ್ ಅವರೊಂದಿಗೆ ಇಂಗ್ಲೆಂಡ್ನ ಮಾಜಿ ವೇಗಿ ಅನ್ಯಾ ಶ್ರಬ್ಸೋಲ್ ಅವರು ಆರ್ಸಿಬಿ ತಂಡದ ಹೊಸ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಯಾವಾಗ?
ವುಮೆನ್ಸ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ನವೆಂಬರ್ 26 ರಿಂದ 29 ರೊಳಗೆ ನಡೆಯಲಿದೆ. ಈ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರ್ತಿಯರ ಪಟ್ಟಿಯನ್ನು ಸಲ್ಲಿಸಬೇಕು. ಇಲ್ಲಿ ಆಟಗಾರ್ತಿಯರನ್ನು ತಂಡದಲ್ಲೇ ಉಳಿಸಿಕೊಳ್ಳಲು ಐದು ಆಯ್ಕೆಗಳನ್ನು ನೀಡಲಾಗಿದೆ. ಅಂದರೆ ಒಂದು ಫ್ರಾಂಚೈಸಿ ಒಟ್ಟು ಐವರನ್ನು ರಿಟೈನ್ ಮಾಡಿಕೊಳ್ಳಬಹುದು.
ಹೀಗೆ ರಿಟೈನ್ ಮಾಡಿಕೊಳ್ಳುವ ಮೊದಲ ಆಟಗಾರ್ತಿಗೆ 3.50 ಕೋಟಿ ರೂ, ಎರಡನೇ ಆಟಗಾರ್ತಿಗೆ 2.50 ಕೋಟಿ ರೂ, ಮೂರನೇ ಆಟಗಾರ್ತಿಗೆ 1.75 ಕೋಟಿ ರೂ, ನಾಲ್ಕನೇ ಆಟಗಾರ್ತಿಗೆ 1 ಕೋಟಿ ರೂ. ಹಾಗೂ ಐದನೇ ಆಟಗಾರ್ತಿಗೆ 50 ಲಕ್ಷ ರೂ. ನಿಗದಿ ಮಾಡಲಾಗಿದೆ. ಅಂದರೆ ಒಟ್ಟು 9.25 ಕೋಟಿ ರೂ. ವ್ಯಯಿಸಿ ಗರಿಷ್ಠ 5 ಆಟಗಾರ್ತಿಯರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು.
For More Updates Join our WhatsApp Group :
