ಅಹಮದಾಬಾದ್: ಮೋಹನ್ಲಾಲ್ ನಟಿಸಿದ್ದ ಮಲಯಾಳಂ ಭಾಷೆಯ ದೃಶ್ಯಂ ಸಿನಿಮಾ ನೋಡದವರೇ ಇಲ್ಲ ಎನ್ನಬಹುದು. ಈ ಸಿನಿಮಾವನ್ನು ಕನ್ನಡದಲ್ಲಿ ಕೂಡ ದೃಶ್ಯ ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಗಿದ್ದು, ರವಿಚಂದ್ರನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇದೀಗ ಈ ಸಿನಿಮಾದಲ್ಲಿ ನಾಯಕ ಕೊಲೆಯನ್ನು ಮುಚ್ಚಿಹಾಕಲು ಯಾವ ರೀತಿ ಪ್ಲಾನ್ ಮಾಡುತ್ತಾನೋ ಅದೇ ರೀತಿಯ ಪ್ಲಾನ್ ಅನ್ನು ಅಹಮದಾಬಾದ್ನ ಮಹಿಳೆಯೊಬ್ಬಳು ಮಾಡಿದ್ದಾಳೆ. ತನ್ನ ಗಂಡನನ್ನು ಕೊಲೆ ಮಾಡಿದ ಆಕೆ ಆತನ ಶವವನ್ನು ಅಡುಗೆಮನೆಯ ಟೈಲ್ಸ್ ಅಡಿಯಲ್ಲಿ ಹೂತುಹಾಕಿದ್ದಾಳೆ!
ಅಹಮದಾಬಾದ್ ನಗರದಲ್ಲಿ ಮಹಿಳೆಯ ಪ್ರಿಯಕರ ಮತ್ತು ಇಬ್ಬರು ಸಂಬಂಧಿಕರು ಸೇರಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದಾರೆ. ಸಮೀರ್ ಅನ್ಸಾರಿ ಎಂಬ ವ್ಯಕ್ತಿ ನಿಗೂಢವಾಗಿ ಕಣ್ಮರೆಯಾಗಿ ಸುಮಾರು 1 ವರ್ಷವಾಗಿತ್ತು. ಬರೋಬ್ಬರಿ 1 ವರ್ಷದ ನಂತರ, ಈ ಕೊಲೆಯ ರಹಸ್ಯ ಬಯಲಾಗಿದೆ.
ನಿನ್ನೆ ರಾತ್ರಿ ಅಹಮದಾಬಾದ್ನ ಅಪರಾಧ ವಿಭಾಗವು ಅಹಮದಾಬಾದ್ನ ಸರ್ಖೇಜ್ ಪ್ರದೇಶದಲ್ಲಿ ಬೀಗ ಹಾಕಿದ ಸಮೀರ್ ಅವರ ಮನೆಯ ಅಡುಗೆಮನೆಯ ನೆಲದ ಕೆಳಗಿನಿಂದ ಅವರ ಮೂಳೆಗಳು ಮತ್ತು ಇತರ ಅವಶೇಷಗಳನ್ನು ಹೊರತೆಗೆದಿದೆ. ಸಮೀರ್ ಅನ್ಸಾರಿ ಅವರ ಪತ್ನಿ ರೂಬಿ ಅವರು ಅನ್ಸಾರಿಯನ್ನು ಕೊಲ್ಲಲು ತಮ್ಮ ಪ್ರಿಯಕರ ಇಮ್ರಾನ್ ವಘೇಲಾ ಮತ್ತು ಅವರ ಇಬ್ಬರು ಸಂಬಂಧಿಕರ ಸಹಾಯವನ್ನು ಪಡೆದುಕೊಂಡಿದ್ದರು. ಈ ಅಕ್ರಮ ಸಂಬಂಧವೇ ಕೊಲೆಗೆ ಮುಖ್ಯ ಕಾರಣವಾಗಿದೆ. ಹಾಗಾದರೆ, ಈ ಕೊಲೆ ಹಾಗೂ ಶವದ ರಹಸ್ಯ ಬಯಲಾಗಿದ್ದು ಹೇಗೆ? ಎಂಬುದರ ಕುತೂಹಲಕಾರಿ ಸಂಗತಿ ಇಲ್ಲಿದೆ.
1 ವರ್ಷದ ಹಿಂದೆ ಆಗಿದ್ದೇನು?:
35 ವರ್ಷದ ಸಮೀರ್ ಅನ್ಸಾರಿ 2024ರಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. 1 ವರ್ಷದಿಂದ ಅವರಿಗಾಗಿ ಹುಡುಕಾಟ ನಡೆದಿತ್ತು. ಆದರೆ ಅವರ ಸುಳಿವು ಸಿಕ್ಕಿರಲಿಲ್ಲ. ರೂಬಿ ಮತ್ತು ಆಕೆಯ ಗಂಡ ಸಮೀರ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ರೂಬಿ ಇಮ್ರಾನ್ನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದೇ ಈ ಜಗಳಕ್ಕೆ ಕಾರಣವಾಗಿತ್ತು. ಈ ಜಗಳವೇ ಅಂತಿಮವಾಗಿ ಭೀಕರ ಹತ್ಯೆಗೆ ಕಾರಣವಾಯಿತು.
For More Updates Join our WhatsApp Group :




