ಚಿಕ್ಕಮಗಳೂರು: ಈ ವರ್ಷ ಮೇ ತಿಂಗಳಿಂದ ನವೆಂಬರ್ ಮಧ್ಯಭಾಗದವರೆಗೆ ಆರು ತಿಂಗಳು ನಿರಂತರವಾಗಿ ಸುರಿದ ಮಳೆಯ ಪರಿಣಾಮ ಕಾಫಿ ತೋಟಗಳು ತತ್ತರಿಸಿಹೋಗಿವೆ. ಹೀಗಾಗಿ ಈ ವರ್ಷ ಭಾರತದ ಕಾಫಿ ಉತ್ಪಾದನೆಯಲ್ಲಿ 30,000 ಟನ್ ಕಡಿಮೆಯಾಗಲಿದೆ ಎಂದು ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರನ್ನು ಪ್ರತಿನಿಧಿಸುವ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಶನ್ (KPA) ತಿಳಿಸಿದೆ. 2025–26ರ ಸಾಲಿನಲ್ಲಿ ದೇಶದ ಕಾಫಿ ಉತ್ಪಾದನೆ 4,03,000 ಟನ್ ಆಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಅದು 3,73,000 ಟನ್ ತಲುಪಬಹುದು ಎಂದು KPA ಹೇಳಿದೆ.
ಈ ವರ್ಷ ಅರಬಿಕಾ ಬೆಳೆಯನ್ನು 1,18,125 ಟನ್ ಅಂದಾಜಿಸಲಾಗಿತ್ತು. ಆದರೆ ಬೆಳೆ 1 ಲಕ್ಷದಿಂದ 1.2 ಲಕ್ಷ ಟನ್ ಸಿಗಲಿದೆ. ಹಾಗೆಯೇ ರೋಬಸ್ಟಾ ಉತ್ಪಾದನೆ 2.6 ಲಕ್ಷ ಟನ್‌ನಿಂದ 2.7 ಲಕ್ಷ ಟನ್ ಸಿಗಬಹುದಾಗಿದ್ದು, ನಿರೀಕ್ಷೆ 2,84,875 ಟನ್ ಇದ್ದವು ಎಂದು ತನ್ನ ಉತ್ಪಾದನಾ ಅಂದಾಜನ್ನು KPA ಸೋಮವಾರ ಚಿಕ್ಕಮಗಳೂರಿನಲ್ಲಿ ನಡೆದ 67ನೇ ವಾರ್ಷಿಕ ಮಹಾಸಭೆ ಸಂದರ್ಭ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಮೇ ತಿಂಗಳಿಂದ ಅಕ್ಟೋಬರ್ ಮಧ್ಯಭಾಗದವರೆಗೆ ಸುರಿದ ನಿರಂತರ ಮಳೆಯಿಂದಾಗಿ ಉಂಟಾದ ತಂಪು ಹವಾಮಾನ ಮತ್ತು ಸೂರ್ಯರಶ್ಮಿಯ ಕೊರತೆಯಿಂದಾಗಿ ಎಲೆ ಮತ್ತು ಕಾಂಡ ಕೊಳೆ ರೋಗಗಳು ಕಾಣಿಸಿಕೊಂಡಿವೆ. ಅಲ್ಲದೆ, ಮಳೆ ಬೆಳೆಯ ಮೇಲೆ ನಾನಾ ರೀತಿ ಪರಿಣಾಮ ಬೀರಿರುವ ಕಾರಣ ಕಾಫಿ ಉತ್ಪಾದನೆಯಲ್ಲಿ ಈ ಬಾರಿ ಕುಸಿತ ಉಂಟಾಗಲಿದೆ. ದೇಶದ ಒಟ್ಟು 4.65 ಲಕ್ಷ ಹೆಕ್ಟೇರ್ ಕಾಫಿ ಬೆಳೆ ಪ್ರದೇಶದಲ್ಲಿ ಕರ್ನಾಟಕದ ಪಾಲು 2.46 ಲಕ್ಷ ಹೆಕ್ಟೇರ್. ದೇಶದ ಶೇ.70 ರಷ್ಟು ಕಾಫಿಯನ್ನು ಕರ್ನಾಟಕ ಬೆಳೆಯುತ್ತದೆ. ಆದರೆ ಕಳೆದ 20 ವರ್ಷಗಳಲ್ಲಿ ಉತ್ಪಾದನಾಶಕ್ತಿ ಮತ್ತು ಬೆಳೆ ಪ್ರದೇಶ ಎರಡೂ ತೀವ್ರ ಹವಾಮಾನದ ಪರಿಣಾಮವಾಗಿ ಕುಸಿಯುತ್ತಿವೆ ಎಂದು KPA ಅಧ್ಯಕ್ಷ ಎ. ಅರವಿಂದ್ ರಾವ್ ತಿಳಿಸಿದ್ದಾರೆ.
For More Updates Join our WhatsApp Group :
