ಫಾಕ್ಸ್​ಕಾನ್ ಘಟಕ ರಾಜಕೀಯ ಚರ್ಚೆ.

ಫಾಕ್ಸ್​ಕಾನ್ ಘಟಕ ರಾಜಕೀಯ ಚರ್ಚೆ.

‘ಕರ್ನಾಟಕ ಮಾದರಿ’ ಎಂದ ರಾಹುಲ್; ‘ಮೇಕ್ ಇನ್ ಇಂಡಿಯಾ ಫಲ’ ಎಂದ ಕೇಂದ್ರ ಸಚಿವ.

ನವದೆಹಲಿ: ಬೆಂಗಳೂರಿನ ಬಳಿ ಫಾಕ್ಸ್​ಕಾನ್ ಬೃಹತ್ ಘಟಕ ಸ್ಥಾಪಿಸಿ 9 ತಿಂಗಳಲ್ಲಿ 30,000 ಮಂದಿಯನ್ನು ನೇಮಕಾತಿ ಮಾಡಿಕೊಂಡ ಸುದ್ದಿಯನ್ನು ಹಂಚಿಕೊಂಡು, ಕರ್ನಾಟಕದ ಮಾದರಿ ಹಾಕಿಕೊಟ್ಟಿದೆ ಎಂದಿದ್ದ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇದು ಮೇಕ್ ಇನ್ ಇಂಡಿಯಾ ಯೋಜನೆ ಫಲ ಎಂದು ನೆನಪಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾವನ್ನು ಗುರುತಿಸಿದ್ದಕ್ಕೆ ಧನ್ಯವಾದ ಎಂದು ರಾಹುಲ್ ಗಾಂಧಿಗೆ ಪರೋಕ್ಷವಾಗಿ ಟಾಂಟ್ ಕೊಟ್ಟಿದ್ದಾರೆ ಕೇಂದ್ರ ಸಚಿವರು.

ರಾಹುಲ್ ಗಾಂಧಿ ಹೇಳಿದ್ದೇನು?

‘ಕೇವಲ 8-9 ತಿಂಗಳಲ್ಲಿ 30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಈವರೆಗೂ ಇಷ್ಟು ವೇಗದಲ್ಲಿ ಫ್ಯಾಕ್ಟರಿ ನೇಮಕಾತಿ ಆಗಿದ್ದಿಲ್ಲ. ಇದು ಕೇವಲ ಅಂಕಿ ಅಂಶ ಅಲ್ಲ. ಪರಿವರ್ತನಾತ್ಮಕ ಉದ್ಯೋಗ ಸೃಷ್ಟಿ ಇದು. ಈ ಘಟಕದಲ್ಲಿ ಶೇ. 80ರಷ್ಟು ಮಹಿಳೆಯರೇ ಇರುವುದು, ಅದರಲ್ಲೂ 19-24ರ ವಯಸ್ಸಿನಲ್ಲಿರುವ, ಮೊದಲ ಬಾರಿಗೆ ಕೆಲಸ ಮಾಡುತ್ತಿರುವ ಯುವತಿಯರೇ ಇದ್ದಾರೆ. ಹೀಗಾಗಿ, ಈ ಉದ್ಯೋಗಸೃಷ್ಟಿ ಇನ್ನೂ ಪ್ರಬಲವೆನಿಸುತ್ತದೆ’ ಎಂದು ಕಾಂಗ್ರೆಸ್ ನಾಯಕ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹೇಳಿದ್ದರು.

 ‘ಈ ಮಟ್ಟದಲ್ಲಿ ಮತ್ತು ವೇಗದಲ್ಲಿ ಉತ್ಪಾದನಾ ವಲಯ ಬೆಳೆಯಬಲ್ಲಂತಹ ಇಕೋಸಿಸ್ಟಂ ಅನ್ನು ನಿರ್ಮಿಸುವ ಮೂಲಕ ಕರ್ನಾಟಕವು ಒಂದು ಮಾದರಿ ಹಾಕಿಕೊಟ್ಟಿದೆ. ಗೌರವದ ಕೆಲಸ ಮತ್ತು ಸರ್ವರಿಗೂ ಅವಕಾಶ.. ಇಂಥ ಭಾರತವನ್ನು ನಾವು ಕಟ್ಟಬೇಕಿರುವುದು’ ಎಂದು ರಾಹುಲ್ ಗಾಂಧಿ ಕರೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಿನಿ ವೈಷ್ಣವ್, ‘ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ಸನ್ನು ಗುರುತಿಸಿದ್ದಕ್ಕೆ ಧನ್ಯವಾದ. ನೀವು ಗಮನಿಸಿದಂತೆ, ನಮ್ಮ ಪ್ರಧಾನಿಗಳ ದೃಷ್ಟಿಯಂತೆ ನಾವು ಉತ್ಪಾದಕ ಆರ್ಥಿಕತೆಯಾಗಿ ಬೆಳೆಯುತ್ತಿದ್ದೇವೆ’ ಎಂದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *