ವೃದ್ಧ ಮಹಿಳೆಯ ಮೇಲೆ ಅತ್ಯಾಚಾರ–ಕೊ*, ಆರೋಪಿ ಆತ್ಮಹ*..
ಬೆಂಗಳೂರು: ಬೆಂಗಳೂರಿನ ಸಿಲ್ಕ್ ಬೋರ್ಡ್ ಸಮೀಪದ ಕೆಎಎಸ್ ಕಾಲೋನಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, 65 ವರ್ಷದ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಪೈಶಾಚಿಕ ಕೃತ್ಯ ಎಸಗಿದ ಬಳಿಕ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಮಹಿಳೆಯನ್ನು ಸರಿತಾ ಎಂದು ಗುರುತಿಸಲಾಗಿದ್ದು, ಮನೆಗೆಲಸ ಮಾಡುತ್ತಿದ್ದ ದೇವರಾಜು (50) ಎಂಬಾತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನೆ ಶನಿವಾರ ಮಧ್ಯರಾತ್ರಿ ನಡೆದಿದ್ದು, ಬೆಳಗಿನ ಜಾವ ಸುಮಾರು 4.30ರ ವೇಳೆಗೆ ವಿಚಾರ ಬಹಿರಂಗವಾಗಿದೆ.
ಸರಿತಾ ಅವರ ಪತಿ ಉದ್ಯೋಗ ನಿಮಿತ್ತ ದುಬೈಗೆ ತೆರಳಿದ್ದು, ಮುಂಜಾವ 4.30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ್ದರು. ಮನೆಗೆ ಬಂದು ಬೆಲ್ ಹೊಡೆದಾಗ, ಮೊದಲ ಮಹಡಿಯಲ್ಲಿ ಇದ್ದ 27 ವರ್ಷದ ಮಗಳು ಬಾಗಿಲು ತೆರೆದು ತನ್ನ ಕೋಣೆಗೆ ತೆರಳಿದ್ದಾಳೆ. ಬಳಿಕ ಪತಿ ಕೆಳ ಮಹಡಿಯಲ್ಲಿ ಇದ್ದ ಸರಿತಾ ಅವರ ಕೋಣೆಗೆ ತೆರಳಿದಾಗ ಭೀಕರ ಘಟನೆ ಬೆಳಕಿಗೆ ಬಂದಿದೆ.
ಘಟನೆ ನಡೆದ ಸಮಯದಲ್ಲೇ ಮನೆಯ ಮೊದಲ ಮಹಡಿಯಲ್ಲಿ ಮಗಳು ಇದ್ದರೂ, ಕೆಳ ಮಹಡಿಯಲ್ಲಿ ನಡೆದ ದುಷ್ಕೃತ್ಯದ ಬಗ್ಗೆ ಆಕೆಗೆ ಅರಿವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ದೇವರಾಜು ಕೃತ್ಯ ಎಸಗಿ ಬಳಿಕ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮಾಹಿತಿ ಪಡೆದ ಮೈಕೋ ಲೇಔಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನಗರದಲ್ಲಿ ವೃದ್ಧ ಮಹಿಳೆಯರ ಮೇಲೂ ಇಂತಹ ಕ್ರೂರ ಕೃತ್ಯಗಳು ನಡೆಯುತ್ತಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ.
For More Updates Join our WhatsApp Group :




