ಬೆಳಗಾವಿ-ಮಹಾರಾಷ್ಟ್ರ ಗಡಿಯ ದರೋಡೆ ಪ್ರಕರಣದಲ್ಲಿ ಸಿಐಟಿ ತನಿಖೆ ಮುಂದುವರಿಯುತ್ತಿದೆ.
ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಯ ಚೋರ್ಲಾ ಘಾಟ್ನಲ್ಲಿ ಎರಡು ಕಂಟೇನರ್ಗಳಲ್ಲಿದ್ದ ಅಂದಾಜು 400 ಕೋಟಿ ರೂ. ಮೌಲ್ಯದ ರದ್ದಾದ ನೋಟುಗಳ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕಿಶೋರ್ ಸಾಳ್ವೆಯನ್ನು ಬಂಧಿಸಲಾಗಿದೆ. ಇದರೊಂದಿಗೆ, ಪ್ರಕರಣ ಸಂಬಂಧ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಕಿಶೋರ್ ಸಾಳ್ವೆ, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಘೋಟಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ನಂತರ ಆತನನ್ನು ಬಂಧಿಸಲಾಗಿದೆ.
ಕಿಶೋರ್ ಸಾಳ್ವೆ ಬಂಧನದೊಂದಿಗೆ ದರೋಡೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಪ್ರಕರಣದ ಗಂಭೀರತೆಯನ್ನು ಮನಗಂಡಿರುವ ಮಹಾರಾಷ್ಟ್ರ ಸರ್ಕಾರ, ತನಿಖೆಯನ್ನು ಕಟ್ಟುನಿಟ್ಟಾಗಿ ಮುಂದುವರೆಸಲು ಸೂಚನೆ ನೀಡಿದೆ.
ಈ ಪ್ರಕರಣದಲ್ಲಿ ದೂರುದಾರರಾಗಿರುವ ಸಂದೀಪ್ ಪಾಟೀಲ್ ಅವರ ಕಿಡ್ನ್ಯಾಪ್ ಮತ್ತು 400 ಕೋಟಿ ರೂ. ದರೋಡೆ ಸಂಬಂಧಿತ ಅಂಶಗಳ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವೈರಲ್ ಆಗಿರುವ ಆಡಿಯೋ ಸಂಭಾಷಣೆಗಳನ್ನೂ ಎಸ್ಐಟಿ ಪರಿಶೀಲನೆಗೆ ತೆಗೆದುಕೊಂಡಿದೆ.
ಎಸ್ಐಟಿ ತನಿಖೆಯ ವಿರುದ್ಧವೇ ದೂರುದಾರ ಸಂದೀಪ್ ಪಾಟೀಲ್ ಇತ್ತೀಚೆಗೆ ಆರೋಪಗಳನ್ನು ಮಾಡಿದ್ದರು. ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಅವರು, ತನಿಖೆಯಲ್ಲಿ ಪಾರದರ್ಶಕತೆ ಇಲ್ಲ. ಒತ್ತಡ ಮತ್ತು ಏಕಪಕ್ಷೀಯ ತನಿಖೆ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಕರ್ನಾಟಕದಲ್ಲಿ ದೂರು ನೀಡುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿತ್ತು.
400 ಕೋಟಿ ರೂ. ದರೋಡೆ ಹಿನ್ನೆಲೆ
ಬೆಳಗಾವಿ ಜಿಲ್ಲೆಯ ಚೋರ್ಲಾ ಘಾಟ್ ಪ್ರದೇಶದಲ್ಲಿ 2025 ರ ಅಕ್ಟೋಬರ್ 25 ರಂದು ಎರಡು ಕಂಟೇನರ್ಗಳಲ್ಲಿದ್ದ ಸುಮಾರು 400 ಕೋಟಿ ರೂ. ಹಣವನ್ನು ದರೋಡೆ ಮಾಡಲಾಗಿತ್ತು ಎಂದು ಮಹಾರಾಷ್ಟ್ರದ ನಾಸಿಕ್ ಮೂಲದ ಉದ್ಯಮಿ ಸಂದೀಪ್ ದತ್ತಾ ಪಾಟೀಲ್ ಇತ್ತೀಚೆಗೆ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರು. ಅದರೊಂದಿಗೆ, ಪ್ರಕರಣ ಬೆಳಕಿಗೆ ಬಂದಿದ್ದು ದೇಶದಾದ್ಯಂತ ಸಂಚಲನ ಮೂಡಿಸಿತ್ತು. ದೂರುದಾರರ ಪ್ರಕಾರ, ದರೋಡೆಯಾದ ಹಣವು ಗುಜರಾತ್ ಮೂಲದ ಬಿಲ್ಡರ್ ಕಿಶೋರ್ ಸವಲಾ ಸೇಠ್ ಅವರಿಗೆ ಸೇರಿದ್ದು, ಅದರಲ್ಲಿ ರದ್ದಾದ 2,000 ರೂ. ಮುಖಬೆಲೆಯ ನೋಟುಗಳೂ ಇದ್ದವು ಎನ್ನಲಾಗಿದೆ.
For More Updates Join our WhatsApp Group :




