ಬಜೆಟ್ 2026–27ರಲ್ಲಿ ಆರೋಗ್ಯ ಕ್ಷೇತ್ರಕ್ಕೆ ಭರಪೂರ ಕೊಡುಗೆ.
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಸಾಮಾನ್ಯ ಜನರ ಆರೋಗ್ಯ ಮತ್ತು ಜೇಬು ಇವೆರಡನ್ನೂ ಗಮನದಲ್ಲಿಟ್ಟುಕೊಂಡು ಬಜೆಟ್ ಸಿದ್ಧಪಡಿಸಲಾಗಿದೆ. ಕ್ಯಾನ್ಸರ್ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ದುಬಾರಿ ಚಿಕಿತ್ಸೆಗಳೊಂದಿಗೆ ಹೋರಾಡುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಬಿಗ್ ಗಿಫ್ಟ್ ನೀಡಲಾಗಿದೆ. ಆರೋಗ್ಯವು ಶ್ರೀಮಂತರಿಗೆ ಮಾತ್ರವಲ್ಲದೆ, ಪ್ರತಿಯೊಬ್ಬ ನಾಗರಿಕನಿಗೆ ಕೈಗೆಟುಕುವ ಬೆಲೆಯಲ್ಲಿ ದೊರೆಯುವಂತೆ ಮಾಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಯಾವೆಲ್ಲ ಔಷಧಿಗಳ ದರ ಇಳಿಕೆ?
ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಅಥವಾ ಮಧುಮೇಹದಂತಹ ಗಂಭೀರ ಕಾಯಿಲೆ ಪತ್ತೆಯಾದಾಗ, ಇಡೀ ಕುಟುಂಬವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಈ ನೋವನ್ನು ಅರ್ಥಮಾಡಿಕೊಂಡ ಹಣಕಾಸು ಸಚಿವರು, ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳನ್ನು ಈಗ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ದರ ಇಳಿಕೆ ಮಾಡಿ ಘೋಷಣೆ ಮಾಡಿದ್ದಾರೆ. ಈ ಉಪಕ್ರಮದಿಂದ ಮಧ್ಯಮ ವರ್ಗ ಮತ್ತು ಬಡವರಿಗೆ ಪ್ರಯೋಜನವಾಗಲಿದೆ. ಸರ್ಕಾರದ ಈ ನಿರ್ಧಾರವು ರೋಗಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದಲ್ಲದೆ, ಹಣದ ಕೊರತೆಯಿಂದಾಗಿ ಚಿಕಿತ್ಸೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತದೆ.
ಇದಲ್ಲದೆ, ಔಷಧ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ‘ಬಯೋ-ಫಾರ್ಮಾ ಶಕ್ತಿ’ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆಯಡಿ 10,000 ಕೋಟಿ ರೂ.ಗಳ ಹೂಡಿಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ದೇಶದಾದ್ಯಂತ ಮೂರು ಹೊಸ ಏಮ್ಸ್ ಆಸ್ಪತ್ರೆ ಸ್ಥಾಪನೆ
ಜನರು ಚಿಕಿತ್ಸೆಗಾಗಿ ದೆಹಲಿ ಅಥವಾ ಮುಂಬೈನಂತಹ ಪ್ರಮುಖ ನಗರಗಳಿಗೆ ಧಾವಿಸುತ್ತಿರುವುದನ್ನು ತಪ್ಪಿಸಲು ದೇಶಾದ್ಯಂತ ಮೂರು ಹೊಸ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಆಸ್ಪತ್ರೆ ನಿರ್ಮಾಣವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ದೇಶದ ಎಲ್ಲ ಭಾಗದ ಜನರಿಗೆ ವಿಶ್ವ ದರ್ಜೆಯ ವೈದ್ಯಕೀಯ ಸೌಲಭ್ಯಗಳು ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಈ ಘೋಷಣೆ ಮಾಡಲಾಗಿದೆ.
For More Updates Join our WhatsApp Group :




