ಧಾರವಾಡ: ಮುಮ್ಮಿಗಟ್ಟಿ ಗ್ರಾಮಕ್ಕೆ CCTV ಕಣ್ಗಾವಲು.

ಧಾರವಾಡ: ಮುಮ್ಮಿಗಟ್ಟಿ ಗ್ರಾಮಕ್ಕೆ CCTV ಕಣ್ಗಾವಲು.

ಅಪರಾಧ ಹಿನ್ನಡೆಯಾಗಿ, ಯುವತಿಯರ ಸುರಕ್ಷತೆ ಹೆಚ್ಚಳ.

ಧಾರವಾಡ: ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮ ಸುಮಾರು 12 ಸಾವಿರ ಜನಸಂಖ್ಯೆ ಹೊಂದಿದ್ದು, ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಹೊಂದಿಕೊಂಡೇ ಇದೆ. ಈ ಗ್ರಾಮದ ಪಕ್ಕ ಹೋಗುವ ವಾಹನಗಳ ಮೂಲಕ ಹೊರಗಿನ ಜನರು ಅಕ್ರಮಗಳನ್ನು ಎಸಗುವುದು ಸಾಮಾನ್ಯದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್​ನಲ್ಲಿ ಮುಖ್ಯವಾದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ಗ್ರಾಮ ಪಂಚಾಯತ್​​ಗಳ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡಬೇಕೆಂದರೂ ಅನುದಾನದ ಕೊರತೆ ಎದ್ದು ಕಾಣುತ್ತೆ. ಆದರೆ ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವರ್ಷಕ್ಕೆ 50 ಲಕ್ಷ ರೂಪಾಯಿ ತೆರಿಗೆ ಸಂಗ್ರಹಿಸಿದ ಸಾಧನೆ ಒಂದು ಕಡೆಯಾದರೆ, ಇದೀಗ ಇಡೀ ಗ್ರಾಮದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿರುವುದು ಮತ್ತೊಂದು ಸಾಧನೆ.

ಬಹುತೇಕ ಗ್ರಾಮ ಪಂಚಾಯತ್​ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ನೆರವೇರಿಸಲು ಅನುದಾನ ಕೊರತೆ ಇರುತ್ತದೆ. ಆದರೆ, ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಿದ ಮೇಲೂ ಉಳಿದ ಹಣದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಅಹಿತರ ಘಟನೆಗಳು ನಡೆಯುವುದು ನಿಂತು ಹೋಗಿವೆ.

7.5 ಲಕ್ಷ ರೂ.ನಲ್ಲಿ ಹೆಚ್​ಡಿ ಸಿಸಿಟಿವಿ ಕ್ಯಾಮರಾ ಅಳವಡಿಕೆ

ಇದೀಗ ಒಟ್ಟು 22 ಹೈ ಡೆಫಿನಿಶನ್ ಸಿಸಿ ಟಿವಿ ಕ್ಯಾಮರಾಗಳನ್ನು ಗ್ರಾಮದಲ್ಲಿ ಅಳವಡಿಸಲಾಗಿದ್ದು, ಇದಕ್ಕೆ ಸುಮಾರು 7.5 ಲಕ್ಷ ರೂಪಾಯಿ ಖರ್ಚಾಗಿದೆ. ಅಲ್ಲದೇ ಸುಮಾರು ಒಂದು ತಿಂಗಳವರೆಗೆ ಬ್ಯಾಕ್ ಅಪ್ ಇಟ್ಟುಕೊಳ್ಳಬಹುದಾಗಿದೆ. ಎಲ್ಲವನ್ನೂ ಗ್ರಾಮ ಪಂಚಾಯತ್ ಕಚೇರಿಯಿಂದಲೇ ನಿರ್ವಹಿಸಲಾಗುತ್ತಿದೆ. ಅಲ್ಲದೇ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಉಳಿದ ಸದಸ್ಯರೆಲ್ಲ ಸೇರಿ ಸಭೆ ನಡೆಸಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಮೊದಲಿಗೆ ಎಲ್ಲರೂ ಗ್ರಾಮದಲ್ಲಿ ತಿರುಗಾಡಿ ಎಲ್ಲೆಲ್ಲ ಈ ಕ್ಯಾಮೆರಾಗಳನ್ನು ಅಳವಡಿಸಬೇಕು ಅನ್ನೋದನ್ನು ನಿರ್ಧರಿಸಿದರು. ಬಳಿಕ ಗರಗ್ ಠಾಣೆಯ ಪೊಲೀಸರಿಗೂ ಈ ಮಾಹಿತಿಯನ್ನು ನೀಡಲಾಗಿ, ಅವರು ಕೂಡ ಸಲಹೆಗಳನ್ನು ನೀಡಿದರು. ಅದೆಲ್ಲದರ ಪರಿಣಾಮವಾಗಿ ಇಂದು ಇಡೀ ಗ್ರಾಮವೇ ಸಿಸಿ ಟಿವಿ ಕ್ಯಾಮೆರಾಗಳ ಕಣ್ಗಾವಲಿಗೆ ಬಂದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *