ಎಐಸಿಸಿ ನಾಯಕರ ಮೌನ: ಕಾಂಗ್ರೆಸಿಗೆ ನಾಯಕತ್ವ ಗೊಂದಲ
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಕಳೆದ ಕೆಲ ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಭುಗಲೇಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮೌನದ ಬಗ್ಗೆ ಕಾಂಗ್ರೆಸ್ ಶಾಸಕರು ಬೇಸರ ಹೊರಹಾಕಿದ್ದು, ನಾಯಕತ್ವ ಬದಲಾವಣೆ ಗೊಂದಲದಿಂದ ನಮ್ಮ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೆಲವೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದೆ. ಹೀಗಿದ್ದರೂ ನಾಯಕತ್ವ ಬದಲಾವಣೆ ವಿಷಯವನ್ನು ಹೈಕಮಾಂಡ್ ಇತ್ಯರ್ಥಪಡಿಸದ ಕಾರಣ ಯಾರನ್ನು ನಂಬಿ ಚುನಾವಣೆ ಎದುರಿಸಬೇಕು ಎಂಬುದೇ ಕಾಂಗ್ರೆಸಿಗರ ಗೊಂದಲಕ್ಕೆ ಕಾರಣವಾಗಿದೆಯಂತೆ.
ಒಬ್ಬರ ಬಳಿ ಹೋದ್ರೆ ಮತ್ತೊಬ್ಬರಿಗೆ ಸಿಟ್ಟು
ಸಿಎಂ ಸಿದ್ದರಾಮಯ್ಯ ಬಳಿ ಅನುದಾನ ಕೇಳಲೆಂದು ತೆರಳಿದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಬೇಸರವಾಗುತ್ತೆ. ಇತ್ತ ಡಿಸಿಎಂ ಮನೆಗೆ ತೆರಳಿದರೆ ಸಿಎಂಗೆ ಸಿಟ್ಟು ಬರುತ್ತೆ. ಹೀಗಿರುವಾಗ ನಾವು ಏನು ಮಾಡೋದು ಎಂದು ಅಧಿವೇಶನ ನಡೆಯುವ ಸಂದರ್ಭದಲ್ಲಿ ಶಾಸಕರು ಪರಸ್ಪರ ಬೇಸರ ಹಂಚಿಕೊಂಡಿದ್ದಾರೆ. ಅಲ್ಲದೆ ಹಲವು ಬಾರಿ ಹಿರಿಯ ನಾಯಕರೇ ವಿಷಯ ಪ್ರಸ್ತಾಪಿಸದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೌನಕ್ಕೆ ಶರಣಾಗಿದ್ದಾರೆ. ಐಸಿಸಿ ನಾಯಕರ ಈ ಮೌನದಿಂದಲೇ ಉಂಟಾಗಿರುವ ಗೊಂದಲ ಮತ್ತಷ್ಟು ಹೆಚ್ಚಾಗುತ್ತಿದೆ ಎಂದು ಕೆಲ ಶಾಸಕರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
For More Updates Join our WhatsApp Group :




