ಬೆಂಗಳೂರಿನ ಮೆಟ್ರೋ ಟಿಕೆಟ್ ದರ ಏರಿಕೆ ಬಿಸಿ.

ಬೆಂಗಳೂರಿನ ಮೆಟ್ರೋ ಟಿಕೆಟ್ ದರ ಏರಿಕೆ ಬಿಸಿ.

ಫೆಬ್ರವರಿ 9 ರಿಂದ 5% ಹೆಚ್ಚಳ, ಪ್ರಯಾಣಿಕರಲ್ಲಿ ಅಸಮಾಧಾನ.

ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ದರ ಹೆಚ್ಚಳದ ಶಾಕ್ ನೀಡಲಿದೆ. ಮೆಟ್ರೋ ಟಿಕೆಟ್ ದರವನ್ನು 5% ರಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಮೆಟ್ರೋ ನಿಗಮವು ಈ ಬಗ್ಗೆ ಸಿದ್ಧತೆ ನಡೆಸಿದೆ. ಕಳೆದ ವರ್ಷ ಫೆಬ್ರವರಿ 9 ರಂದು ದಾಖಲೆಯ 101.5% ರಷ್ಟು ದರ ಏರಿಕೆ ಮಾಡಲಾಗಿತ್ತು. ಈ ನಿರ್ಧಾರವು ಪ್ರಯಾಣಿಕರು ಮತ್ತು ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ವ್ಯಾಪಕ ವಿರೋಧ ವ್ಯಕ್ತವಾದ ನಂತರ, ಮೆಟ್ರೋ ನಿಗಮವು ದರವನ್ನು ಸುಮಾರು 70% ರಷ್ಟು ಇಳಿಕೆ ಮಾಡಿತ್ತು. ಆದರೆ, ಈಗ ಮತ್ತೊಮ್ಮೆ ಅದೇ ಫೆಬ್ರವರಿ 9 ರಂದು 5% ರಷ್ಟು ದರ ಹೆಚ್ಚಳಕ್ಕೆ ಮೆಟ್ರೋ ನಿಗಮ ಮುಂದಾಗಿದೆ.

ಈ ದರ ಏರಿಕೆಯ ಪ್ರಸ್ತಾವನೆಗೆ ಪ್ರಯಾಣಿಕರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಡೀ ಜೀವನವನ್ನು ತೆರಿಗೆ ಕಟ್ಟಿಕೊಂಡೇ ಬದುಕಬೇಕಾ? ಮಧ್ಯಮ ವರ್ಗದವರು, ಬಡ ವರ್ಗದವರು ಬದುಕೋಕೆ ಆಗೋದಿಲ್ಲವೇ?” ಎಂದು ಲಾಲ್ ಬಾಗ್ ಮೆಟ್ರೋ ಸ್ಟೇಷನ್ ಬಳಿ ಟಿವಿ9 ವರದಿಗಾರರ ಮುಂದೆ ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಪ್ರಸ್ತುತ ಪ್ರತಿಯೊಂದು ದಿನಸಿ ವಸ್ತುಗಳ ಬೆಲೆಯೂ ಏರಿಕೆಯಾಗಿರುವ ಸಂದರ್ಭದಲ್ಲಿ ಮೆಟ್ರೋ ದರ ಹೆಚ್ಚಳ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಒಂದು ಕಡೆ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಮತ್ತೊಂದು ಕಡೆ ಅಗತ್ಯ ಸೇವೆಗಳ ಬೆಲೆಗಳನ್ನು ಹೆಚ್ಚಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಎದ್ದಿವೆ.

ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್:

ಮಾರ್ಗಇಂದಿನ ದರಹೊಸ ದರ
ಆರ್.ವಿ ರೋಡ್-ಬೊಮ್ಮಸಂದ್ರ60 ರೂ.63 ರೂ.
ಮೆಜೆಸ್ಟಿಕ್ – ವೈಟ್​​ ಫೀಲ್ಡ್​​80 ರೂ.84 ರೂ.
ಮೆಜೆಸ್ಟಿಕ್ – ಬೊಮ್ಮಸಂದ್ರ80 ರೂ.84 ರೂ.
ಮೆಜೆಸ್ಟಿಕ್ – ಚೆಲ್ಲಘಟ್ಟ60 ರೂ63 ರೂ.
ವೈಟ್​​ ಫೀಲ್ಡ್ – ಚೆಲ್ಲಘಟ್ಟ90 ರೂ.95 ರೂ.
ಸಿಲ್ಕ್​​​ ಇನ್ಸ್ಟಿಟ್ಯೂಟ್ – ಮಾದಾವರ90 ರೂ.95 ರೂ.

ಕಳೆದ ಬಾರಿ ದರ ಹೆಚ್ಚಳದಿಂದಾಗಿ ಅನೇಕ ಪ್ರಯಾಣಿಕರು ಮೆಟ್ರೋ ಬಳಸುವುದನ್ನು ನಿಲ್ಲಿಸಿ, ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಆರಂಭಿಸಿದ್ದರು. ಇದರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಮತ್ತೆ ಹೆಚ್ಚಾಗಿತ್ತು. ವರದಿಗಳ ಪ್ರಕಾರ, ದೇಶದಲ್ಲೇ ಬೆಂಗಳೂರು ಮೆಟ್ರೋದ ದರ ಅತಿ ಹೆಚ್ಚಿದೆ. ಮೆಟ್ರೋ ನಿಗಮದ ಆಂತರಿಕ ಯೋಜನೆಯ ಪ್ರಕಾರ, ಪ್ರಯಾಣಿಕರು ಈ ಪ್ರಸ್ತಾವಿತ ದರ ಹೆಚ್ಚಳವನ್ನು ವಿರೋಧಿಸದಿದ್ದರೆ ಅದನ್ನು ಮುಂದುವರೆಸುವ ಮತ್ತು ವಿರೋಧಿಸಿದರೆ ನಿಲ್ಲಿಸುವ ಲೆಕ್ಕಾಚಾರವಿದೆ. ಸರ್ಕಾರವೂ ಕೂಡ ಇದೇ ರೀತಿಯ ಸೂಚನೆಯನ್ನು ಮೆಟ್ರೋ ನಿಗಮಕ್ಕೆ ನೀಡಿದೆ ಎನ್ನಲಾಗಿದೆ. ವೇತನ ಕಡಿಮೆ, ಕೆಲಸ ಕಡಿತಗೊಳ್ಳುತ್ತಿರುವ ಇಂತಹ ಸನ್ನಿವೇಶದಲ್ಲಿ ಮತ್ತೆ ಮತ್ತೆ ದರ ಏರಿಸಿದರೆ ಬದುಕುವುದು ಹೇಗೆ ಎಂದು ಪ್ರಯಾಣಿಕರು ಹಂಚಿಕೊಂಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *