ಡ್ರಗ್ ಹಾವಳಿ ನಿಯಂತ್ರಣದಲ್ಲಿ CCB ವೈಫಲ್ಯ.

ಡ್ರಗ್ ಹಾವಳಿ ನಿಯಂತ್ರಣದಲ್ಲಿ CCB ವೈಫಲ್ಯ.

ಮೈಸೂರು ಸಿಸಿಬಿ ಸಿಬ್ಬಂದಿಗೆ Commissioner ಸೀಮಾ ಲಾಟ್ಕರ್ ಬಿಗ್ ಶಾಕ್.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚೆಗೆ ಡ್ರಗ್ ತಯಾರಿಕೆ  ಮತ್ತು ಮಾರಾಟದ ಜಾಲ ಹೆಚ್ಚುತ್ತಿದೆ. ಆದರೆ ನಗರದ ಸಿಸಿಬಿ ಪೊಲೀಸರು ಮಾತ್ರ ಮಾದಕ ವಸ್ತು ಹಾವಳಿ ನಿಯಂತ್ರಿಸುವಲ್ಲಿ ವೈಫಲ್ಯ ತೋರಿದ್ದಾರೆ. ಪೊಲೀಸರ ಈ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಮೈಸೂರು ಸಿಸಿಬಿ ಪೊಲೀಸ್ ವಿಂಗ್‌ಗೆ ಮೇಜರ್ ಸರ್ಜರಿ ನಡೆಸಿದ್ದಾರೆ.

ಒಂದೇ ಬಾರಿಗೆ 10 ಸಿಬ್ಬಂದಿಯ ವರ್ಗಾವಣೆ

ಇತ್ತೀಚೆಗಷ್ಟೇ ನಗರದ ಹೆಬ್ಬಾಳದಲ್ಲಿ ಫಿನಾಯಿಲ್ ಫ್ಯಾಕ್ಟರಿಯ ಸೋಗಿನಲ್ಲಿ ನಡೆಸುತ್ತಿದ್ದ ಡ್ರಗ್ಸ್ ತಯಾರಕ ಘಟಕವನ್ನು ದೆಹಲಿಯ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಭೇದಿಸಿತ್ತು. ಮೊದಲಿಗೆ ಯಾವುದೇ ಮಾದಕ ವಸ್ತು ಸಿಕ್ಕಿಲ್ಲವೆಂಬ ಸುದ್ದಿ ಹರಿದಾಡಿದರೂ, ಎನ್​ಸಿಬಿ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ ನಂತರ ಡ್ರಗ್ಸ್ ಪತ್ತೆಯಾಗಿರುವುದನ್ನು ಖಚಿತಪಡಿಸಿತ್ತು. ಈ ಪ್ರಕರಣ ಸಿಸಿಬಿಯ ನಿರ್ಲಕ್ಷ್ಯವನ್ನು ತೋರಿಸಿದ್ದು, ಇದರಿಂದ ಮುಖಬಂಗವಾದ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಒಂದೇ ಬಾರಿಗೆ ಸಿಸಿಬಿಯ ಸುಮಾರು 10 ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳದ ಅಧಿಕಾರಿಗಳು

ಸಾಕಷ್ಟು ವರ್ಷಗಳಿಂದ ಸಿಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್ಸ್‌ಟೇಬಲ್ ಹಾಗೂ ಹೆಡ್‌ ಕಾನ್ಸ್‌ಟೇಬಲ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಅವರನ್ನು ಮೂಲ ಠಾಣೆಗಳಿಗೆ ಕಳುಹಿಸುವಂತೆ ಆದೇಶ ಹೊರಡಿಸಲಾಗಿದೆ. ಈ ಅಧಿಕಾರಿಗಳು ಮಾದಕ ವಸ್ತು ಮಾರಾಟ ಹಾಗೂ ಪೂರೈಕೆ ಜಾಲವನ್ನು ನಿಯಂತ್ರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ, ಡ್ರಗ್ ಮಾರಾಟಗಾರರ ಕುರಿತಾಗಿ ಲಭ್ಯವಾಗಿದ್ದ ಸುಳಿವುಗಳ ಮೇಲೂ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿ ಅವರನ್ನು ಟ್ರಾನ್ಸ್ಫರ್ ಮಾಡಲಾಗಿದೆ ಎನ್ನಲಾಗಿದೆ.

ಸಿಸಿಬಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ನಗರದಲ್ಲಿ ಡ್ರಗ್ ಜಾಲ ಸಂಪೂರ್ಣ ನಿರ್ಮೂಲನೆಗೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಜರುಗಲಿದೆ ಎನ್ನಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *