15 ದಿನದ ಜಾತ್ರೆಯಲ್ಲಿ ಏನೆಲ್ಲಾ ವಿಶೇಷ ಗೊತ್ತಾ?
ತುಮಕೂರು : ಭಕ್ತಿ, ಸಂಸ್ಕೃತಿ, ವ್ಯಾಪಾರ ಮತ್ತು ಸಂಭ್ರಮ. ಈ ಎಲ್ಲದರ ಸಂಗಮವಾಗಿರುವ ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ ಇಂದು ಅಧಿಕೃತವಾಗಿ ಆರಂಭಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದು, ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ವಿಶೇಷವಾಗಿ ಜಾತ್ರೆಯ ಅಂಗವಾಗಿ ನಡೆಯುವ ದನದ ವ್ಯಾಪಾರ ಜನರ ಗಮನ ಸೆಳೆಯುತ್ತಿದೆ.
ಜಾತ್ರೆ ಪ್ರಯುಕ್ತ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ
ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ಇಂದು ಸಂಭ್ರಮದಿಂದ ಆರಂಭವಾಗಿದೆ. ಜಾತ್ರೆ ಪ್ರಯುಕ್ತ ಇಂದಿನಿಂದ 15 ದಿನಗಳ ಕಾಲ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಕಳೆದ 60 ವರ್ಷಗಳಿಗೂ ಅಧಿಕ ಕಾಲದಿಂದ ಈ ವಸ್ತು ಪ್ರದರ್ಶನ ನಡೆದುಕೊಂಡು ಬರುತ್ತಿದ್ದು, ಜನರ ಗಮನ ಸೆಳೆಯುವ ಅಪಾರ ನಿರೀಕ್ಷೆ ಇದೆ.
ಇನ್ನು ಸಿದ್ದಗಂಗಾ ಜಾತ್ರೆ ಅಂದರೆ ಒಂದು ಸಂಭ್ರಮ. ಅದರಲ್ಲೂ ಭಕ್ತರು ಮತ್ತು ಜನರು ಕಾಯುವುದು ಒಂದೇ ಒಂದು ವಿಶೇಷಕ್ಕೆ, ಅದುವೇ ದನಗಳ ಜಾತ್ರೆ. ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ತಳಿಯ ಸಾವಿರಾರು ದನಗಳು ಜಾತ್ರೆಗೆ ಆಗಮಿಸಿವೆ. 60 ಸಾವಿರದಿಂದ 16 ಲಕ್ಷ ರೂ ಬೆಲೆ ಬಾಳುವ ವಿವಿಧ ತಳಿಯ ದನಗಳು ಇಲ್ಲಿ ವ್ಯಾಪಾರಕ್ಕೆ ಕರೆತರಲಾಗಿದ್ದು, ಈ 15 ದಿನಗಳ ಜಾತ್ರೆಯಲ್ಲಿ ದನಗಳ ಜಾತ್ರೆಗೆ ಹೆಚ್ಚಿನ ವ್ಯಾಪಾರ ನಡೆಯುವ ನಿರೀಕ್ಷೆ ಇದೆ.
13 ನಾಟಕಗಳ ಪ್ರದರ್ಶನ
ಸಿದ್ದಗಂಗಾ ಮಠದಲ್ಲಿ ದನದ ಜಾತ್ರೆ ಹೊರತು ಪಡಿಸಿ ಹಲವು ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ವಿಶೇಷವಾಗಿ ಮಠದ ಆವರಣದಲ್ಲಿ 1964ರಿಂದ ನಡೆದುಕೊಂಡು ಬಂದಿರುವ ವಸ್ತು ಪ್ರದರ್ಶನಕ್ಕೆ ತನ್ನದೇ ಆದ ಇತಿಹಾಸವಿದೆ. ಜಾತ್ರೆಯ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿ ಫೆಬ್ರವರಿ 16ರಂದು ರಥೋತ್ಸವ ನಡೆಯಲಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಕಳೆ ನೀಡಲು ಇಂದಿನಿಂದ 15 ದಿನಗಳ ಕಾಲ 31 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಇದರ ಜೊತೆಗೆ 13 ನಾಟಕಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.
For More Updates Join our WhatsApp Group :




