ಚಂದ್ರಬಾಬು ನಾಯ್ಡು: ಹಿಂದಿನ ಸರ್ಕಾರ ಬಾತ್ರೂಮ್ ಕ್ಲೀನಿಂಗ್ ರಾಸಾಯನಿಕ ಬಳಸಿ ಲಡ್ಡು ತಯಾರಿಸಿದೆ.
ಹೈದರಾಬಾದ್: ಜಗತ್ಪ್ರಸಿದ್ಧ ತಿರುಪತಿ ತಿಮ್ಮಪ್ಪನ ಲಡ್ಡು ಲಡಾಯಿ ಮುಂದುವರಿದಿದೆ. ಸ್ನಾನಗೃಹ, ಶೌಚಗೃಹ ಸ್ವಚ್ಛಗೊಳಿಸಲು ಬಳಸುವ ರಾಸಾನಿಕ ಕಲಬೆರಕೆ ಮಾಡಿರುವ ತುಪ್ಪದಿಂದ ತಿರುಪತಿ ಲಡ್ಡು ತಯಾರಿಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ. ಯಮ್ಮಿಗನೂರು ವಿಧಾನಸಭಾ ಕ್ಷೇತ್ರದಲ್ಲಿ ಪಾಸ್ಬುಕ್ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲಡ್ಡುಗಳಲ್ಲಿ ಬಾತ್ರೂಮ್ ಕ್ಲೀನಿಂಗ್ ಕೆಮಿಕಲ್ಗಳಿಂದ ತಯಾರಿಸಿದ ತುಪ್ಪ ಬಳಸಿದ್ದಾರೆ. ಆ ಮೂಲಕ ಪವಿತ್ರವಾದ ತಿರುಮಲ ದೇವಸ್ಥಾನದ ಪ್ರಸಾದದ ಪಾವಿತ್ರ್ಯತೆ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿಯ ಘನತೆಯನ್ನು ಹಾಳುಮಾಡಿದ್ದಾರೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.
ಸುಮಾರು 5 ವರ್ಷಗಳ ಕಾಲ ಇದೇ ರೀತಿ ಮೋಸ ಮಾಡಿದ್ದಾರೆ. ತುಪ್ಪದ ಕಲಬೆರಕೆಯು ದೇವರ ವಿರುದ್ಧ ಮಾಡಿದ ಮಹಾಪಾಪ. ಈ ಪ್ರಕರಣದಲ್ಲಿ ಶಾಮೀಲಾದ ಯಾರನ್ನೂ ನಾನು ಸುಮ್ಮನೆ ಬಿಡಲ್ಲ ಎಂದು ನಾಯ್ಡು ಗುಡುಗಿದ್ದಾರೆ.
ಲಡ್ಡು ತಯಾರಿಕೆಯಲ್ಲಿ ರಾಸಾಯನಿಕ ಬೆರೆಸಿದ ತುಪ್ಪವನ್ನು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ವೈಎಸ್ಆರ್ಸಿಪಿ ಆಡಳಿತದಲ್ಲಿ ಸುಮಾರು ಐದು ವರ್ಷಗಳ ಕಾಲ ಈ ರೀತಿ ಮಾಡಲಾಗಿತ್ತು. ಅದೇ ಅವಧಿಯಲ್ಲಿ ಶ್ರೀಶೈಲಂ ದೇವಸ್ಥಾನಕ್ಕೂ ಇದೇ ರೀತಿಯ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಲಡ್ಡು ತಯಾರಿಸಲು ಬಳಸುತ್ತಿದ್ದ ತುಪ್ಪದಲ್ಲಿ ವಿವಿಧ ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು. ತರಕಾರಿ ಆಧಾರಿತ ಉತ್ಪನ್ನಗಳು ಹೆಚ್ಚು ದುಬಾರಿಯಾಗಿದ್ದು, ಪ್ರಾಣಿಗಳ ಕೊಬ್ಬು ಅಗ್ಗವಾಗಿರುವುದರಿಂದ ಹಾಗೆ ಮಾಡಿರಬಹುದು ಎಂದು ಅವರು ನಾಯ್ಡು ಹೇಳಿದ್ದಾರೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ವರದಿಯನ್ನು ಅವರು ಉಲ್ಲೇಖಿಸಿದ ಅವರು, ಪ್ರಾಣಿಗಳ ಕೊಬ್ಬಿನ ಅಂಶ ಇದ್ದುದು ವರದಿಯಿಂದ ತಿಳಿದುಬಂದಿದೆ ಎಂದಿದ್ದಾರೆ.
For More Updates Join our WhatsApp Group :




