ದೆಹಲಿಗೆ ತಲುಪಿದ BJP-JDS ಮೈತ್ರಿ ಗೊಂದಲ.

ದೆಹಲಿಗೆ ತಲುಪಿದ BJP-JDS ಮೈತ್ರಿ ಗೊಂದಲ.

ಮಾಜಿ ಶಾಸಕರ ಹೇಳಿಕೆಗಳು ಏರಿಸಿದ ಕೀಲು, ಕೇಂದ್ರ ಹಂತದಲ್ಲಿ ಚರ್ಚೆ.

ನವದೆಹಲಿ: ಕರ್ನಾಟಕದಲ್ಲಿ ಎನ್‌ಡಿಎ ಮೈತ್ರಿ ರಾಜಕೀಯ ಗೊಂದಲ ಇದೀಗ ದೆಹಲಿ ಅಂಗಳಕ್ಕೂ ತಲುಪಿದೆ. ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿ ಮಾಜಿ ಶಾಸಕರ ಹೇಳಿಕೆಗಳು ಜೆಡಿಎಸ್  ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಬೆಳವಣಿಗೆ ಕುರಿತು ಕೇಂದ್ರ ನಾಯಕರ ಮಟ್ಟದಲ್ಲೇ ಚರ್ಚೆಗಳು ನಡೆದಿವೆ. ಟಿಕೆಟ್ ಹಂಚಿಕೆ ಕುರಿತಾಗಿ ಬಿಜೆಪಿ ನಾಯಕ ಪ್ರೀತಂಗೌಡ ಹಾಗೂ ನಾರಾಯಣಗೌಡ ನೀಡಿದ ಹೇಳಿಕೆಗಳಿಗೆ ಜೆಡಿಎಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕರ ವರ್ತನೆ ಬಗ್ಗೆ ಜೆಡಿಎಸ್ ರಾಜ್ಯ ನಾಯಕರು ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಬೆನ್ನಲ್ಲೇ ಅಗರ್ವಾಲ್ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಜೊತೆ ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ.

ರಾಜ್ಯ ರಾಜಕೀಯ ಬೆಳವಣಿಗೆಗಳು, ಮಾಜಿ ಶಾಸಕರ ಹೇಳಿಕೆಗಳು ಹಾಗೂ ಮೈತ್ರಿ ಪಕ್ಷಗಳ ನಡುವಿನ ಸಮನ್ವಯದ ಬಗ್ಗೆ ಇಬ್ಬರು ನಾಯಕರು ಚರ್ಚೆ ನಡೆಸಿದರೆಂದು ತಿಳಿದುಬಂದಿದೆ. ಅನಗತ್ಯ ಹೇಳಿಕೆಗಳು ಮೈತ್ರಿ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೊಂದಲ ಉಂಟಾಗಬಹುದು ಹಾಗೂ ಜೆಡಿಎಸ್-ಬಿಜೆಪಿ ಕಾರ್ಯಕರ್ತರಲ್ಲೂ ಗೊಂದಲ ಹೆಚ್ಚಬಹುದು. ಕಾರ್ಯಕರ್ತರಲ್ಲಿ ಗೊಂದಲವಾದರೆ ಕಾಂಗ್ರೆಸ್‌ಗೆ ಲಾಭವಾಗುತ್ತದೆ ಎಂಬ ಆತಂಕವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ನಾಯಕರ ಹೇಳಿಕೆಗಳಿಗೆ ಬ್ರೇಕ್ ಹಾಕಲಾಗುವುದು ಎಂದು ಅಗರ್ವಾಲ್ ತಿಳಿಸಿದ್ದಾರೆ.

ಏನು ಹೇಳಿದ್ದರು ಪ್ರೀತಂಗೌಡ, ನಾರಾಯಣಗೌಡ?

ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಮಂಡ್ಯ ಜಿಲ್ಲೆಯಲ್ಲಿ ಮೈತ್ರಿ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ನಾಯಕರ ನಡುವೆ ಟಿಕೆಟ್ ಗುದ್ದಾಟ ಆರಂಭವಾಗಿತ್ತು. 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಕ್ಷೇತ್ರ ಹಂಚಿಕೆ ಕುರಿತು ಎರಡೂ ಪಕ್ಷಗಳ ನಾಯಕರು ತಮ್ಮ ತಮ್ಮ ಹಕ್ಕು ಮಂಡಿಸಲು ಮುಂದಾಗಿದ್ದರು. ಮಂಡ್ಯ ಜಿಲ್ಲೆಯ ಕೆಲವು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡಬೇಕು ಎಂದು ಬಿಜೆಪಿ ನಾಯಕರಾದ ಪ್ರೀತಂಗೌಡ, ನಾರಾಯಣಗೌಡ ಒತ್ತಾಯಿಸಿದ್ದರು. ಕೆಆರ್ ಪೇಟೆ ಸೇರಿದಂತೆ ಮೂರು ಕ್ಷೇತ್ರಗಳನ್ನು ನೀಡುವಂತೆ ಆಗ್ರಹ ವ್ಯಕ್ತಪಡಿಸಲಾಗಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *