ಸ್ಟ್ರೆಸ್ ಮತ್ತು ಮಲಬದ್ದತೆ: ಸಂಬಂಧವಿದೆಯೇ?

ಸ್ಟ್ರೆಸ್ ಮತ್ತು ಮಲಬದ್ದತೆ: ಸಂಬಂಧವಿದೆಯೇ?

ಡಾ. ಅನುರಾಗ್ ಶೆಟ್ಟಿ ವಿವರಿಸುತ್ತಾರೆ ಗಟ್–ಬ್ರೈನ್ ಎಕ್ಸಿಸ್ ಬಗ್ಗೆ.

ಇತ್ತೀಚಿನ ದಿನಗಳಲ್ಲಿ ಸ್ಟ್ರೆಸ್ ಅಥವಾ ಒತ್ತಡ  ಮನುಷ್ಯನ ಆರೋಗ್ಯವನ್ನು ಅರಿವಿಲ್ಲದಂತೆ ಹಾಳು ಮಾಡುತ್ತಿದೆ. ಆದರೆ ಒತ್ತಡ ಜೀರ್ಣಕಾರಿ ಸಮಸ್ಯೆಗೆ ಹಾನಿ ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ… ಹೌದು, ಕರುಳು ಮತ್ತು ಮೆದುಳಿಗೆ ಪರಸ್ಪರ ಸಂಪರ್ಕವಿರುತ್ತದೆ. ಅದಕ್ಕಾಗಿಯೇ ಇವುಗಳನ್ನು ‘ಗಟ್ ಬ್ರೈನ್ ಎಕ್ಸಿಸ್’ (ಮೆದುಳು ಕರುಳಿನ ಅಕ್ಷ) ಎಂದು ಕರೆಯಲಾಗುತ್ತದೆ. ಇದು ದ್ವಿಮುಖ ಸಂಪರ್ಕ ವ್ಯವಸ್ಥೆಯಾಗಿದ್ದು ನರಗಳು, ಹಾರ್ಮೋನ್ ಗಳು ಮತ್ತು ಕರುಳಿನ ಮೈಕ್ರೊಬೈಟಾ ಈ ಸಂಪರ್ಕವನ್ನು ನಿರ್ವಹಿಸುತ್ತವೆ. ಈ ಗಟ್ ಬ್ರೈನ್ ಎಕ್ಸಿಸ್ ವ್ಯವಸ್ಥೆಯ ಕಾರಣ ಸ್ಟ್ರೆಸ್ ಅಥವಾ ಒತ್ತಡವು ನೇರವಾಗಿ ಮತ್ತು ಗಂಭೀರವಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮಲಬದ್ದತೆ ,ಅತಿಸಾರ, ಹೊಟ್ಟೆ ನೋವಿನಂತಹ ಸಮಸ್ಯೆಯನ್ನು ತಂದೊಡ್ಡುತ್ತದೆ. ಈ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್, ಡಾ ಅನುರಾಗ್ ಶೆಟ್ಟಿ ಅವರು ಮತ್ತಷ್ಟು ಮಾಹಿತಿ ಹಂಚಿಕೊಂಡಿದ್ದು ಹೆಚ್ಚಿನ ವಿವರಕ್ಕೆ ಸ್ಟೋರಿ ಓದಿ.

ಒತ್ತಡದ ಸಮಯದಲ್ಲಿ ಕಂಡುಬರುವ ಮಲಬದ್ಧತೆ ಸಮಸ್ಯೆಗೆ ಕಾರಣ, ಸಿಂಪತೆಟಿಕ್ ನರಗಳ ಅತಿಯಾದ ಚಟುವಟಿಕೆಯಿಂದ ಉಂಟಾಗುವ ಕರುಳಿನ ಚಲನವಲನಗಳ ನಿಧಾನಗೊಳ್ಳುವಿಕೆ. ಇದರೊಂದಿಗೆ ಸ್ಟ್ರೆಸ್ ಹಾರ್ಮೋನ್ ಗಳ ಶರೀರದಲ್ಲಿ ಉತ್ಪಾದನೆ, ಕರುಳಿನ ಭೇದ್ಯತೆ ಹೆಚ್ಚಳ, ಹಾಗೂ ಕರುಳಿನ ಸೂಕ್ಷ್ಮ ಜೀವಿಗಳಲ್ಲಿ ಕಂಡುಬರುವ ವ್ಯತ್ಯಾಸಗಳೆಲ್ಲವೂ ಸೇರಿ ಮಲಬದ್ದತೆಯನ್ನು ಹೆಚ್ಚಿಸುತ್ತದೆ. ಅಧ್ಯಯನಗಳು ಹೇಳುವ ಪ್ರಕಾರ, ಒತ್ತಡದ ಸಮಯದಲ್ಲಿ ಆಹಾರ ಸೇವನೆಯ ವಿಧಾನವೂ ಬದಲಾಗುತ್ತದೆ. ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸುವುದು, ಅಧಿಕ ಕೆಫೇನ್ ಸೇವನೆ, ಹೆಚ್ಚು ಸಂಸ್ಕರಿಸಿದ ಆಹಾರ ಪದಾರ್ಥ ಸೇವನೆ, ಫೈಬರ್ ಅಧಿಕವಾಗಿರುವ ಆಹಾರ ಸೇವಿಸದೇ ಇರುವುದು ಇವೆಲ್ಲವೂ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವಂತಹದ್ದಾಗಿರುತ್ತದೆ. ಇದೊಂದು ಚಕ್ರವ್ಯೂಹವಾಗಿದ್ದು ಒತ್ತಡವು ಮಲಬದ್ದತೆ ಹಾಗೂ ಮಲಬದ್ದತೆಯು ಪ್ರತಿಯಾಗಿ ಒತ್ತಡವನ್ನು ವರ್ದಿಸುತ್ತದೆ.

ಮಲಬದ್ದತೆಗೆ ಒತ್ತಡ ಮಾತ್ರ ಕಾರಣವೇ?

ಸಾಮಾನ್ಯವಾಗಿ ಮಲಬದ್ದತೆ ಸಮಸ್ಯೆಗೆ ಒತ್ತಡ ಮಾತ್ರ ಕಾರಣವಲ್ಲ. ಆಹಾರ ಪದ್ದತಿಯಲ್ಲಿ ನಾರಿನಾಂಶದ ಕೊರತೆ, ಕಡಿಮೆ ನೀರು ಕುಡಿಯುವ ಅಭ್ಯಾಸ, ವ್ಯಾಯಾಮದ ಕೊರತೆ, ನಿತ್ಯ ಮಲವಿಸರ್ಜನೆ ಮಾಡುವುದನ್ನು ನಿರ್ಲಕ್ಷಿಸುವುದು ಕೂಡ ಮಲಬದ್ದತೆ ಸಮಸ್ಯೆಗೆ ಕಾರಣವಾಗಬಹುದು.

ಪರಿಹಾರವೇನು ?

ಒತ್ತಡ ಕಡಿಮೆ ಮಾಡಿಕೊಳ್ಳುವುದು ಬಹಳ ಮುಖ್ಯ. ನಾರಿನಾಂಶ ಅಧಿಕವಾಗಿರುವ ಹಣ್ಣು, ತರಕಾರಿಗಳ ಸೇವನೆ, ಮೊಳಕೆಕಾಳುಗಳ ಸೇವನೆ, ಅಗತ್ಯವಾಗಿರುವಷ್ಟು ನೀರು ಕುಡಿಯುವುದು. ಜೊತೆಗೆ ನಿತ್ಯ ವ್ಯಾಯಾಮ, ದೈಹಿಕ ಚಟುವಟಿಕೆ ಅಗತ್ಯ. ಇದರ ಜೊತೆಗೆ ಮಲವಿಸರ್ಜನೆಯ ಸೂಚನೆಯನ್ನು ನಿರ್ಲಕ್ಷಿಸಬಾರದು. ಇದು ದೇಹ ಶುದ್ಧವಾಗಿರಲು ಅಗತ್ಯ ಎಂಬುದು ನೆನಪಿನಲ್ಲಿಡಿ. ಮಲಬದ್ದತೆ ಸಮಸ್ಯೆ ಸರಳ ವಿಧಾನದಿಂದ ಪರಿಹಾರವಾಗದಿದ್ದಲ್ಲಿ ಅಥವಾ ಸಮಸ್ಯೆ ತುಂಬಾ ಸಮಯದವರೆಗೆ ಮುಂದುವರೆದರೆ, ತೂಕ ಕಡಿಮೆಯಾದರೆ, ಹಿಮೊಗ್ಲೊಬಿನ್ ಮಟ್ಟದಲ್ಲಿ ಇಳಿತ ಕಂಡುಬಂದರೆ, ಮಲದಲ್ಲಿ ರಕ್ತ ಕಾಣಿಸಿಕೊಂಡರೆ ಅಥವಾ ಕುಟುಂಬದಲ್ಲಿ ಕೊಲನ್ ಕ್ಯಾನ್ಸರ್ ಇತಿಹಾಸವಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *