ಟೀಸರ್ ನೋಡಿ ಸಿನಿಮಾ ತೀರ್ಮಾನಿಸಬೇಡಿ; ತಾಳ್ಮೆ ವಹಿಸಲು ಮನವಿ.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಭಾರಿ ದೊಡ್ಡ ಪ್ರಾಜೆಕ್ಟ್ ಇದಾಗಿದ್ದು, ಸಹಜವಾಗಿಯೇ ಸಿನಿಮಾದ ವಿರುದ್ಧ ಕೆಲವರು ದೂರುಗಳು, ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದ ಟೀಸರ್ ಬಿಡುಗಡೆ ಆದ ಬಳಿಕವಂತೂ ಟೀಕೆ ಮಾಡುವವರು, ದೂರು ನೀಡುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆ ಚಿತ್ರೀಕರಣದ ಸಮಯದಲ್ಲಿಯೂ ಸಹ ‘ಟಾಕ್ಸಿಕ್’ ಸಿನಿಮಾ ಬಗ್ಗೆ ದೂರುಗಳು ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಇದೀಗ ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಅವರು ‘ಟಾಕ್ಸಿಕ್’ ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ.
‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆದ ಬಳಿಕ ಮಹಿಳಾ ಆಯೋಗಕ್ಕೆ, ಸೆನ್ಸಾರ್ ಮಂಡಳಿಗೆ ದೂರುಗಳು ದಾಖಲಾಗಿದ್ದವು. ಇದೀಗ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ‘ಟಾಕ್ಸಿಕ್’ ಸಿನಿಮಾದ ವಿರುದ್ಧ ಆರೋಪ ಮಾಡಿದ್ದು, ದೇವದೂತ ಸಂತ ಮಿಕಯೇಲ್ ಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇಂದು ಫಿಲಂ ಚೇಂಬರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನೂತನ ಅಧ್ಯಕ್ಷೆ ಜಯಮಾಲ ಅವರು ಈ ಬಗ್ಗೆ ಮಾತನಾಡಿದ್ದು, ‘ಟಾಕ್ಸಿಕ್’ ಸಿನಿಮಾಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
‘ಸಿನಿಮಾದ ಟೀಸರ್ ನೋಡಿ ಇಡೀ ಸಿನಿಮಾ ಹೀಗೆಯೇ ಇರಲಿದೆ ಎಂದು ಮುಂಚಿತವಾಗಿ ನಿರ್ಧರಿಸುವುದು ತಪ್ಪು. ನಿಮಗೆ ಪ್ರತಿಭಟನೆ ಮಾಡುವ ಮನಸ್ಸಿದ್ದರೆ ಸಿನಿಮಾ ನೋಡಿ ಪ್ರತಿಭಟನೆ ಮಾಡಿ. ಕನ್ನಡ ಚಿತ್ರರಂಗ ಪ್ರಾರಂಭವಾಗಿ 93 ವರ್ಷಗಳಾಯ್ತು, ಈ ವರೆಗೆ ಒಮ್ಮೆಯೂ ಸಹ ಇತರ ಧರ್ಮಕ್ಕೆ ಅವಹೇಳನ ಮಾಡಿಲ್ಲ, ಸರ್ವಧರ್ಮ ಸಹಿಷ್ಣುವಾಗಿ ಚಿತ್ರರಂಗ ನಡೆದುಕೊಂಡು ಬಂದಿದೆ. ಈಗ ಒಂದು ಟೀಸರ್ ನೋಡಿ ಸಿನಿಮಾ ಬಗ್ಗೆ, ಚಿತ್ರರಂಗದ ಬಗ್ಗೆ ಆರೋಪ ಮಾಡುವುದು ತಪ್ಪು’ ಎಂದಿದ್ದಾರೆ ಜಯಮಾಲ.
For More Updates Join our WhatsApp Group :



