3 ಕಡೆ ದಾಳಿ – 5 ಆರೋಪಿಗಳ ಬಂಧನ, ಡ್ರಗ್ಸ್ ಜಪ್ತಿ.
ಮೈಸೂರು: ಮೈಸೂರು ನಗರದಲ್ಲಿ ಮಾದಕ ವಸ್ತುಗಳ ಜಾಲದ ವಿರುದ್ಧ ಸಿಸಿಬಿ (CCB) ಮತ್ತು ಮಂಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾದಕವಸ್ತು ಮುಕ್ತ ಮೈಸೂರಿಗಾಗಿ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಒಟ್ಟು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಮೊದಲ ಪ್ರಕರಣದಲ್ಲಿ ಮೊಹಮ್ಮದ್ ಕರೀಂ ಮತ್ತು ನಿಷಾದ್ ಪಾಷಾ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಕರೀಂ ಮೇಲೆ ಈಗಾಗಲೇ 5 ಎನ್‌ಡಿಪಿಎಸ್ (NDPS) ಪ್ರಕರಣಗಳು ಹಾಗೂ ನಿಷಾದ್ ಪಾಷಾ ಮೇಲೆ 5 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವರಿಂದ 3.14 ಗ್ರಾಂ ಎಂಡಿಎಂಎ (MDMA) ಸಿಂಥೆಟಿಕ್ ಡ್ರಗ್ಸ್ಗಳನ್ನು ವಶಪಡಿಸಿಲಾಗಿದೆ. ಇನ್ನು ಮಹಾರಾಷ್ಟ್ರದ ಮಾದಕವಸ್ತು ನಿಯಂತ್ರಣಾ ತಂಡಗಳು ಅಥವಾ ಪೊಲೀಸರು ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸಿ ದೊಡ್ಡ ಪ್ರಮಾಣದ ಡ್ರಗ್ಸ್ ಪತ್ತೆ ಹಚ್ಚಿದ ನಂತರ ರಾಜ್ಯದಲ್ಲಿ ಹಲವು ಕಡೆ ಪೋಲಿಸರು ಕೂಡ ಕಾರ್ಯಚರಣೆ ನಡೆಸಿದ್ದರು.
ಇನ್ನು ಎರಡನೇ ಪ್ರಕರಣದಲ್ಲಿ ಸಂಜಯ್ ಮತ್ತು ರಾಜ್‌ಕುಮಾರ್ ಎಂಬುವವನ್ನು ಬಂಧಿಸಲಾಗಿದೆ. ಇವರಿಂದ ಒಟ್ಟು 585 ಗ್ರಾಂ ಗಾಂಜಾ ವಶ ಮಾಡಲಾಗಿದೆ. ಇದರ ಜತೆಗೆ ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಟಿವಿಎಸ್ (TVS) ಬೈಕ್ ವಶಕ್ಕೆ ಪಡೆಯಲಾಗಿದೆ. ಮೂರನೇ ಪ್ರಕರಣದಲ್ಲಿ ಮೊಹಮ್ಮದ್ ಅಫಾಕ್ ಎಂಬುವವನ್ನು ಬಂಧಿಸಲಾಗಿದೆ. ಈತ ರಾಜೀವ್ ನಗರದ ನಿವಾಸಿಯಾಗಿದ್ದು, ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಮೈಸೂರು ಪೊಲೀಸರು ಡ್ರಗ್ಸ್ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ‘ವಿಮುಕ್ತಿ’ ಹೆಸರಿನಲ್ಲಿ ವಿಶೇಷ ಸಹಾಯವಾಣಿಯನ್ನು (8277948080) ಆರಂಭಿಸಿದ್ದಾರೆ.
ನಿಮ್ಮ ಸುತ್ತಮುತ್ತ ಡ್ರಗ್ಸ್ ಮಾರಾಟ, ಸೇವನೆ ಅಥವಾ ಸಾಗಾಟದ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ಈ ಸಂಖ್ಯೆಗೆ ಕರೆ ಮಾಡಲು ಪೊಲೀಸರು ಕೋರಿದ್ದಾರೆ. ಮಾಹಿತಿ ನೀಡುವವರ ವಿವರಗಳನ್ನು ರಹಸ್ಯವಾಗಿಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಮೈಸೂರು ನಗರದಾದ್ಯಂತ ಡ್ರಗ್ಸ್ ಪೆಡ್ಲರ್‌ಗಳ ಮೇಲೆ ಪೊಲೀಸರು ತೀವ್ರ ಕಣ್ಗಾವಲು ಇರಿಸಿದ್ದಾರೆ. ಕಾಲೇಜುಗಳು ಮತ್ತು ಹಾಸ್ಟೆಲ್‌ಗಳ ಸುತ್ತಮುತ್ತ ಗಸ್ತನ್ನು ಹೆಚ್ಚಿಸಲಾಗಿದ್ದು, ಡ್ರಗ್ಸ್ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
For More Updates Join our WhatsApp Group :




