348 ಗ್ರಾಂ ಚಿನ್ನಾಭರಣ ದೋಚಿದ ಫೋಟೋಗ್ರಾಫರ್ ಬಂಧನ.
ಬೆಂಗಳೂರು: ಬಾಡಿಗೆ ಮನೆ ಹುಡುಕಲು ಹೋದ ವ್ಯಕ್ತಿಯೊಬ್ಬ 55 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣ ಕಳ್ಳತನ ನಡೆಸಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ವೈಟ್ ಫೀಲ್ಡ್ ನಿವಾಸಿ ಕಿರಣ್ ಬಂಧಿತ ಆರೋಪಿಯಾಗಿದ್ದು, ಮಲೆಮಹದೇಶ್ವರನ ದರ್ಶನ ಮಾಡಿ ಹಿಂದಿರುಗಿದ್ದ ಆರೋಪಿಯನ್ನು ಪೊಲೀಸರು ಲಾಕ್ ಮಾಡಿದ್ದಾರೆ. ಫೋಟೋ ಸ್ಟುಡಿಯೋ ನಡೆಸುತ್ತಿದ್ದ ಕಿರಣ್, ಕೋವಿಡ್ ವೇಳೆ ನಷ್ಟ ಉಂಟಾದ ಕಾರಣ ಅದನ್ನು ಮುಚ್ಚಿದ್ದ. ಕ್ಯಾಮರಾ ಇದ್ದ ಕಾರಣ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಂಬಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ.
ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೊಂಡನಹಳ್ಳಿಯಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದ ಕಿರಣ್, ಸಾಫ್ಟ್ ವೇರ್ ಎಂಜಿನಿಯರ್ ಜಗದೀಶ್ ಎಂಬವರ ಮನೆ ಬಳಿ ಮನೆ ಬಾಡಿಗೆಗೆ ಇದೆ ಎಂಬ ಬೋರ್ಡ್ ನೋಡಿದ್ದಾನೆ. ಈ ಹಿನ್ನೆಲೆ ವಿಚಾರಿಸಲೆಂದು ಮನೆ ಬಳಿ ಹೋದಾಗ ಶೂ ರ್ಯಾಕ್ನಲ್ಲಿ ಮನೆಯ ಬೀಗ ಆತನಿಗೆ ಕಂಡಿದೆ. ಅದನ್ನು ಬಳಸಿ ಮನೆಯ ಬಾಗಿಲು ಓಪನ್ ಮಾಡಿ ಒಳಗೆ ಹೋಗಿದ್ದ ಈತ, ಮನೆಯಲ್ಲಿದ್ದ ಚಿನ್ನಾಭರಣ ಕದ್ದಿದ್ದ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಳ್ಳತನ ನಡೆದಿರುವ ಬಗ್ಗೆ ಮನೆ ಮಾಲೀಕ ಜಗದೀಶ್ ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿ ಆರೋಪಿಯನ್ನ ಖಾಕಿ ಪತ್ತೆ ಮಾಡಿದೆ.
ಕಳ್ಳತನ ನಡೆಸಿ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಆರೋಪಿ
ಬಾಡಿಗೆ ಮನೆ ಬಗ್ಗೆ ವಿಚಾರಿಸಲು ಹೋಗಿ ಕಳ್ಳತನ ನಡೆಸಿದ್ದ ಆರೋಪಿ ಕಿರಣ್ಗೆ ತಾನು ಮಾಡಿದ ಕೆಲಸದ ಬಗ್ಗೆ ಬಳಿಕ ಪಾಪಪ್ರಜ್ಞೆ ಕಾಡಿತ್ತು. ಹೀಗಾಗಿ ಆ ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನವನ್ನು ಈತ ಮಾಡಿದ್ದ. ಅದಾಗಲೇ ಆರೋಪಿಯ ಜಾಡು ಪತ್ತೆ ಮಾಡಿದ್ದ ಪೊಲೀಸರು ಈತ ಮಲೆಮಹದೇಶ್ವರ ಬೆಟ್ಟದಿಂದ ಬರುತ್ತಿದ್ದಂತೆ ಖೆಡ್ಡಾಗೆ ಕಡೆವಿದ್ದಾರೆ. ಮಾಡಬಾರದ್ದನ್ನು ಮಾಡಲು ಹೋದ ಫೋಟೋಗ್ರಾಪರ್ ಈಗ ಖಾಕಿ ಕೈಲಿ ತಗಲಾಕಿಕೊಂಡಿದ್ದು, ಘಟನೆ ಬಗ್ಗೆ ಆರೋಪಿಯ ವಿಚಾರಣೆ ಮುಂದುವರಿದಿದೆ
For More Updates Join our WhatsApp Group :




