ಕಾಂಗ್ರೆಸ್ ಕಚೇರಿಗಳಿಗೆ ಜಾಗ ಹಂಚಿಕೆ ವಿರುದ್ಧ ಬಿಜೆಪಿ ಆರೋಪ.
ಬೆಂಗಳೂರು : ಕಾಂಗ್ರೆಸ್ ಕಚೇರಿಗಳಿಗಾಗಿ ಕರ್ನಾಟಕದಲ್ಲಿ ಸಿಎ ಸೈಟ್ಗಳನ್ನು ಪಡೆದುಕೊಳ್ಳುತ್ತಿದೆ ಎಂಬ ಬಿಜೆಪಿಯ ಆರೋಪವೀಗ ದೆಹಲಿಯಲ್ಲೂ ಸದ್ದು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಗೌರವ್ ಭಾಟಿಯಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರವು ನಾಗರಿಕ ಸೌಲಭ್ಯಗಳಿಗಾಗಿ ಮೀಸಲಾಗಿದ್ದ 24 ಜಾಗಗಳನ್ನು ಕಾಂಗ್ರೆಸ್ ಪಕ್ಷದ ಕಚೇರಿಗಳಿಗಾಗಿ ಬಳಸಲು ಹೊರಟಿರುವುದು ಏಕೆ? ಈ 24 ಜಾಗಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್ಗೆ ಹಸ್ತಾಂತರಿಸಲಾಗಿದೆ. ಅವುಗಳ ಮೌಲ್ಯ ಸುಮಾರು 50 ಕೋಟಿ ರೂಪಾಯಿ. ಆದರೆ ಭ್ರಷ್ಟಾಚಾರಕ್ಕೆ ಪ್ರಸಿದ್ಧವಾದ ಕಾಂಗ್ರೆಸ್ಗೆ ಅವುಗಳನ್ನು ಕೇವಲ 2 ಕೋಟಿಗೆ ನೀಡಲಾಗಿದೆ. ಇಲ್ಲಿ ಸ್ಪಷ್ಟವಾಗಿ 48 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಗೋಚರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ವರ್ಗಾವಣೆಯ ಉದ್ದೇಶವೇನು? 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸುವುದೇ? ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಮತ್ತು ದೇಶದ ಜನರು ಮಹತ್ವದವರಲ್ಲ. ಕಾಂಗ್ರೆಸ್ ಪಕ್ಷದ ಡಿಎನ್ಎಯೇ ಹೀಗಿದೆ . ಅವರು ‘ನಕಲಿ ಗಾಂಧಿ ಕುಟುಂಬ’ವನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಸಾರ್ವಜನಿಕ ಜಮೀನಿಗೆ ಮಾರುಕಟ್ಟೆ ಮೌಲ್ಯವನ್ನು ಸರ್ಕಾರಕ್ಕೆ ನೀಡದೇ ಕಾಂಗ್ರೆಸ್ ಆಸ್ತಿಯನ್ನಾಗಿ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರವಾನಗಿ ಸಿಗುತ್ತದೆಯೇ ಎಂದವರು ಪ್ರಶ್ನಿಸಿದ್ದಾರೆ.
ನಿನ್ನೆ ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ದಾಖಲೆಗಳೊಂದಿಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳು, ತಾಲೂಕು ಮತ್ತು ಪಂಚಾಯತ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿಗಳಿಗೆ ಭೂಮಿ ಪಡೆದುಕೊಳ್ಳಲಾಗುತ್ತಿದೆ. ಬಡವರಿಗೆ ಮನೆ ಭೂಮಿ ನೀಡದೇ ಸರ್ಕಾರವೇ ಭೂ ಕಬಳಿಕೆಯಲ್ಲಿ ತೊಡಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.
For More Updates Join our WhatsApp Group :



