ಉದಯಪುರದಲ್ಲಿ ಫೆ.26ಕ್ಕೆ ಗುಟ್ಟಾಗಿ ಮದುವೆ, ‘ನೋ ಫೋನ್ ಪಾಲಿಸಿ’ ಜಾರಿ
ದಕ್ಷಿಣ ಭಾರತದ ಚಿತ್ರರಂಗದ ಕ್ಯೂಟ್ ಜೋಡಿ ಎಂದೇ ಖ್ಯಾತಿ ಪಡೆದಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರುಗಳು ಮದುವೆ ಆಗುತ್ತಿದ್ದಾರೆ. ಫೆಬ್ರವರಿ 26ರಂದು ನಡೆಯಲಿದೆ. ಮದುವೆಯನ್ನು ಬಹಳ ಗುಟ್ಟಾಗಿ ಮಾಡಿಕೊಳ್ಳಲು ಈ ಜೋಡಿ ಇಚ್ಛಿಸಿತ್ತು. ಹಾಗಾಗಿ ಮದುವೆಯ ಸ್ಥಳ, ದಿನಾಂಕಗಳನ್ನು ಗುಟ್ಟಾಗಿ ಇರಿಸಿತ್ತು. ಆದರೆ ಇವರ ಮದುವೆಯ ಬಗ್ಗೆ ದಿನಕ್ಕೊಂದು ವಿಷಯಗಳು ಲೀಕ್ ಆಗುತ್ತಲೇ ಇವೆ. ಇದೀಗ ಮದುವೆ ದಿನ ಭದ್ರತೆ ಸಮಸ್ಯೆ ಆಗಬಹುದೆಂಬ ಭೀತಿಯಲ್ಲಿ ರಶ್ಮಿಕಾ ಮತ್ತು ವಿಜಯ್ ಇದ್ದು, ಇದೇ ಕಾರಣಕ್ಕೆ ವಿದೇಶದಿಂದ ಭದ್ರತಾ ಸಿಬ್ಬಂದಿಯನ್ನು ವಿಶೇಷ ಭದ್ರತೆಗಾಗಿ ಕರೆಸಿಕೊಂಡಿದೆ ಈ ಜೋಡಿ.
ತಮ್ಮ ಖಾಸಗಿ ಜೀವನದ ಬಗ್ಗೆ ಸದಾ ಮೌನವಾಗಿರುತ್ತಿದ್ದ ಈ ಜೋಡಿ, ಮದುವೆಯ ವಿಚಾರದಲ್ಲೂ ಅಷ್ಟೇ ಗೌಪ್ಯತೆ ಬಯಸಿತ್ತು. ಆದರೆ ಇತ್ತೀಚೆಗೆ ಇವರ ಮದುವೆಯ ಆಮಂತ್ರಣ ಪತ್ರಿಕೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರಲ್ಲಿ ಮದುವೆಯ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿ ಸೋರಿಕೆಯಾಗಿದ್ದರಿಂದ ಕಳವಳಗೊಂಡಿರುವ ತಾರಾ ಜೋಡಿ, ಈಗ ವಿದೇಶಿ ಭದ್ರತಾ ಸಂಸ್ಥೆಯೊಂದನ್ನು ನೇಮಿಸಿಕೊಂಡಿದೆ. ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ಈ ಮದುವೆಗೆ ಯಾವುದೇ ಅಡೆತಡೆ ಉಂಟಾಗಬಾರದು, ಅಭಿಮಾನಿಗಳಿಂದ ತೊಂದರೆ ಆಗಬಾರದು ಎಂಬುದು ಇವರ ಉದ್ದೇಶ.
ವರದಿಗಳ ಪ್ರಕಾರ, ಮದುವೆಯ ಆವರಣದಲ್ಲಿ ಯಾರೂ ಮೊಬೈಲ್ ಫೋನ್ ಬಳಸುವಂತಿಲ್ಲ ಎಂಬ ‘ನೋ ಫೋನ್ ಪಾಲಿಸಿ’ಯನ್ನು ಜಾರಿಗೆ ತರಲಾಗಿದೆ. ಕೇವಲ ಆಯ್ದ ಆಪ್ತರು ಮತ್ತು ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಮದುವೆಯ ಕೆಲಸ ಕಾರ್ಯಗಳಲ್ಲಿ ತೊಡಗಿರುವ ಸಿಬ್ಬಂದಿಗಳೊಂದಿಗೆ ಗೌಪ್ಯತೆಯ ಒಪ್ಪಂದಕ್ಕೆ (NDA) ಸಹಿ ಹಾಕಿಸಿಕೊಳ್ಳಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ ವಿದೇಶಿ ಭದ್ರತಾ ಸಿಬ್ಬಂದಿಗಳು ಕಣ್ಗಾವಲು ಇರಿಸಲಿದ್ದಾರೆ.
For More Updates Join our WhatsApp Group :



