ಪ್ರಯಾಣಿಕರಿಗೆ ನಿರಾಸೆ ಮಾಡುತ್ತಾ ಬೆಂಗಳೂರು – ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್?

ಪ್ರಯಾಣಿಕರಿಗೆ ನಿರಾಸೆ ಮಾಡುತ್ತಾ ಬೆಂಗಳೂರು – ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್?

ರೈಲಿನ ಅಂದಾಜು ಪ್ರಯಾಣದ ಸಮಯ ಮತ್ತು ವೇಳಾಪಟ್ಟಿಯ ಬಗ್ಗೆ ಈಗ ಭಾರಿ ಚರ್ಚೆ

ಬೆಂಗಳೂರು : ನೈಋತ್ಯ ರೈಲ್ವೆಯು ಬೆಂಗಳೂರು ಮತ್ತು ಗೋವಾದ ಮಡ್ಗಾಂವ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಆದರೆ, ಈ ರೈಲಿನ ಅಂದಾಜು ಪ್ರಯಾಣದ ಸಮಯ ಮತ್ತು ವೇಳಾಪಟ್ಟಿಯ ಬಗ್ಗೆ ಈಗ ಭಾರಿ ಚರ್ಚೆ ಶುರುವಾಗಿದೆ. ವಂದೇ ಭಾರತ್ ರೈಲು ಬೆಂಗಳೂರಿನಿಂದ ಗೋವಾ ತಲುಪಲು ಸುಮಾರು 13 ಗಂಟೆಗಳ ಸಮಯ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದು ಪ್ರೀಮಿಯಂ ರೈಲಿಗೆ ಬಹಳ ದೀರ್ಘ ಸಮಯ ಎಂಬುದು ತಜ್ಞರ ಅಭಿಪ್ರಾಯ. ಜತೆಗೆ ಇದು ಪ್ರಯಾಣಿಕರಿಗೂ ತೊಂದರೆ ಆಗಲಿದೆ.

ಇನ್ನು ರೈಲ್ವೆ ತಜ್ಞ ಸಂಜೀವ್ ದ್ಯಾಮನವರ್ ಅವರ ಪ್ರಕಾರ, ಈ ರೈಲು ಹಗಲು ಹೊತ್ತಿನಲ್ಲಿ ಸಂಚರಿಸಿದರೆ ಪ್ರವಾಸಿಗರು ಇಡೀ ದಿನವನ್ನು ಪ್ರಯಾಣದಲ್ಲೇ ಕಳೆಯಬೇಕಾಗುತ್ತದೆ. ಬೆಳಿಗ್ಗೆ 4 ಗಂಟೆಗೆ ರೈಲು ಬಿಟ್ಟರೆ ಪ್ರವಾಸಿಗರಿಗೆ ತೊಂದರೆಯಾಗಲಿದೆ. ಅದರ ಬದಲು ಸಂಜೆ 6 ಅಥವಾ 7 ಗಂಟೆಗೆ ಹೊರಟು ಬೆಳಿಗ್ಗೆ 7 ಗಂಟೆಗೆ ಗೋವಾ ತಲುಪುವಂತಿದ್ದರೆ ಹೆಚ್ಚು ಅನುಕೂಲಕರ.

ವಂದೇ ಭಾರತ್ ಒಂದು ಪ್ರೀಮಿಯಂ ರೈಲಾದ್ದರಿಂದ ಇದರ ಟಿಕೆಟ್ ದರ ಎಲ್ಲರಿಗೂ ಕೈಗೆಟುಕುವಂತಿರಲಿಕ್ಕಿಲ್ಲ. ಅಲ್ಲದೆ, 12-13 ಗಂಟೆಗಳ ಕಾಲ ಕುಳಿತು ಪ್ರಯಾಣಿಸುವುದು ಕಷ್ಟಕರ. ಹೀಗಾಗಿ ಈ ಮಾರ್ಗಕ್ಕೆ ಸ್ಲೀಪರ್ ಕೋಚ್‌ಗಳಿರುವ  ರೈಲು ಹೆಚ್ಚು ಪ್ರಾಯೋಗಿಕ ಎಂದು ರೈಲ್ವೆ ಹೋರಾಟಗಾರ ಕೃಷ್ಣ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಯಾಣದ ಸಮಯವನ್ನು ಕನಿಷ್ಠ 11 ಗಂಟೆಯೊಳಗೆ ತರಬೇಕು ಎಂದು ರೈಲ್ವೆ ತಜ್ಞರು ಒತ್ತಾಯಿಸಿದ್ದಾರೆ. ಪ್ರಸ್ತುತ ಬೆಂಗಳೂರು-ಬೆಳಗಾವಿ ವಂದೇ ಭಾರತ್ 9 ರಿಂದ 10 ಗಂಟೆ ತೆಗೆದುಕೊಳ್ಳುತ್ತಿದ್ದು, ಅದನ್ನು ಲೊಂಡಾ ಮಾರ್ಗವಾಗಿ ಗೋವಾಕ್ಕೆ ವಿಸ್ತರಿಸುವ ಬಗ್ಗೆಯೂ ಚರ್ಚೆ ನಡೆದಿದೆ. ನೈಋತ್ಯ ರೈಲ್ವೆಯ ಈ ಪ್ರಸ್ತಾವನೆಯು ಈಗ ರೈಲ್ವೆ ಮಂಡಳಿಯ (Railway Board) ಅನುಮೋದನೆಗಾಗಿ ಕಾಯುತ್ತಿದೆ. ಸಾರ್ವಜನಿಕರ ಈ ಆಕ್ಷೇಪಣೆಗಳನ್ನು ಮಂಡಳಿಯು ಪರಿಗಣಿಸುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *