ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್.
ನವದೆಹಲಿ : ಕಳೆದ ಕೆಲ ತಿಂಗಳಲ್ಲಿ, ಅದರಲ್ಲೂ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ರಾಕೆಟ್ನಂತೆ ಆಗಸಕ್ಕೆ ಚಿಮ್ಮಿದ್ದು ಜನಸಾಮಾನ್ಯರಿಗೆ ಆತಂಕ ಮೂಡಿಸಿತ್ತು. ಜಾಗತಿಕವಾಗಿ ಚಿನ್ನಕ್ಕೆ ಬಹಳ ಬೇಡಿಕೆ ಬಂದಿದ್ದರಿಂದ ಈ ಅತಿಯಾದ ಬೆಲೆ ಏರಿಕೆ ಆಗಿತ್ತು. ಚಿನ್ನ ಮತ್ತು ಬೆಳ್ಳಿಗೆ ಈ ಪರಿ ಬೇಡಿಕೆ ಬರಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾರಣ ಬಿಚ್ಚಿಟ್ಟಿದ್ದಾರೆ. ಆರ್ಬಿಐನ 621ನೇ ಕೇಂದ್ರೀಯ ಮಂಡಳಿ ಸಭೆ ಬಳಿಕ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಜೊತೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು ಅಮೆರಿಕದ ಟ್ಯಾರಿಫ್ ಬದಲಾವಣೆಯ ಪರಿಣಾಮಗಳು, ಚಿನ್ನದ ಆಮದು, ಹಣದುಬ್ಬರ ಇತ್ಯಾದಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಚಿನ್ನ ಬೆಳ್ಳಿ ಬೆಲೆ ಹೆಚ್ಚಲು ಇದು ಕಾರಣ…
ನಿರ್ಮಲಾ ಸೀತಾರಾಮನ್ ಪ್ರಕಾರ, ಜಾಗತಿಕವಾಗಿ ವಿವಿಧ ಸೆಂಟ್ರಲ್ ಬ್ಯಾಂಕುಗಳು ಚಿನ್ನ, ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಸಾಕಷ್ಟು ಪ್ರಮಾಣದಲ್ಲಿ ಖರೀದಿಸಿದ್ದರಿಂದ ಬೇಡಿಕೆ ಹೆಚ್ಚಾಗಿ ಬೆಲೆಯೂ ಯದ್ವಾತದ್ವಾ ಏರಿದೆ.
ಭಾರತದ ಸೆಂಟ್ರಲ್ ಬ್ಯಾಂಕ್ ಆದ ಆರ್ಬಿಐ ಕೂಡ ಚಿನ್ನದ ಖರೀದಿಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಹೋಗಿತ್ತು. ನಿರ್ಮಲಾ ಸೀತಾರಾಮನ್ ಪ್ರಕಾರ, ಚಿನ್ನ ಮತ್ತು ಬೆಳ್ಳಿಯ ಆಮದು ಆತಂಕ ಪಡುವ ಮಟ್ಟದಲ್ಲಿ ಇಲ್ಲವಂತೆ. ಅದರ ಬಗ್ಗೆ ಆರ್ಬಿಐ ನಿಗಾ ವಹಿಸಿದೆ ಎನ್ನುತ್ತಾರೆ ಅವರು.
ಅಮೆರಿಕದ ಟ್ಯಾರಿಫ್ ದರ ಬದಲಾವಣೆಯ ಪರಿಣಾಮ ಏನು?
ಸುಪ್ರೀಂಕೋರ್ಟ್ ತೀರ್ಪು ಪರಿಣಾಮವಾಗಿ ಅಮೆರಿಕ ಸರ್ಕಾರವು ಟ್ಯಾರಿಫ್ ಅನ್ನು ಶೇ. 10ಕ್ಕೆ ಇಳಿಸಿ, ನಂತರ ಶೇ. 15ಕ್ಕೆ ಹೆಚ್ಚಿಸಿದ ಕ್ರಮವು ಭಾರತದ ಮೇಲೆ ಏನು ಪರಿಣಾಮ ಬೀರುತ್ತದೆ? ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಇತ್ತೀಚಿನ ಟ್ಯಾರಿಫ್ ಬದಲಾವಣೆಯಿಂದ ಭಾರತದ ಮೇಲೆ ಬೀರಬಹುದಾದ ಪರಿಣಾಮಗಳನ್ನು ಈಗಲೇ ಅವಲೋಕಿಸಲು ಆಗುವುದಿಲ್ಲ. ವಾಣಿಜ್ಯ ಸಚಿವಾಲಯವು ಇದರ ಬಗ್ಗೆ ನಿಗಾ ಇರಿಸಿದೆ ಎಂದಿದ್ದಾರೆ.
For More Updates Join our WhatsApp Group :


