ಆಟವಾಡುತ್ತಿದ್ದಾಗ ಹೃದಯಾಘಾತ – ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಜೈಪುರ: ರಾಜಸ್ಥಾನದ ಗೋಟನ್ನಲ್ಲಿರುವ ಖಾಸಗಿ ಶಾಲೆಯ ಆಟದ ಮೈದಾನದಲ್ಲಿ ಆಟವಾಡುತ್ತಿದ್ದಾಗ 9 ವರ್ಷದ ಬಾಲಕಿ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಆಕೆ ಆಡುವಾಗ ಕುಸಿದುಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೃದಯಾಘಾತದಿಂದ ಮೃತಪಟ್ಟ ಮಗುವನ್ನು 5ನೇ ತರಗತಿಯ ವಿದ್ಯಾರ್ಥಿನಿ ದಿವ್ಯಾ ಎಂದು ಗುರುತಿಸಲಾಗಿದೆ.
ಫೆಬ್ರವರಿ 23ರಂದು ಬೆಳಿಗ್ಗೆ 7.48ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬೆಳಗಿನ ಪ್ರಾರ್ಥನೆಗೆ ಇನ್ನೂ ಸಮಯವಿತ್ತು. ಹೀಗಾಗಿ ಹಲವಾರು ಮಕ್ಕಳು ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದರು. ದಿವ್ಯಾ ಬೇರೆ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಆಕೆ ಇದ್ದಕ್ಕಿದ್ದಂತೆ ಮೂರ್ಛೆ ತಪ್ಪಿ ಬಿದ್ದಿದ್ದಳು. ಶಾಲಾ ಸಿಬ್ಬಂದಿ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಆಕೆಯ ಕುಟುಂಬದ ಒಪ್ಪಿಗೆಯೊಂದಿಗೆ, ಮರಣೋತ್ತರ ಪರೀಕ್ಷೆಯಿಲ್ಲದೆ ಬಾಲಕಿಯ ಅಂತ್ಯಕ್ರಿಯೆ ನಡೆಸಲಾಯಿತು.
ವಿಚಿತ್ರವೆಂದರೆ, ದಿವ್ಯಾಳ ಅಣ್ಣ ಅಭಿಷೇಕ್ ಸುಮಾರು 4 ತಿಂಗಳ ಹಿಂದೆ ಇದೇ ರೀತಿ ಸಾವನ್ನಪ್ಪಿದ್ದ. ಸೆಪ್ಟೆಂಬರ್ 9, 2025ರಂದು ಮನೆಯಲ್ಲಿ ಆಟವಾಡುತ್ತಿದ್ದಾಗ ಅವನು ಮೂರ್ಛೆ ತಪ್ಪಿದ್ದ. ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದರು. ಇದೀಗ ಮತ್ತೊಬ್ಬಳು ಮಗಳು ಕೂಡ ಅದೇ ರೀತಿ ಮೃತಪಟ್ಟಿರುವುದು ಅವರ ಕುಟುಂಬಕ್ಕೆ ಆಘಾತ ಉಂಟುಮಾಡಿದೆ.
For More Updates Join our WhatsApp Group :




