ಮುನಿರತ್ನ ಹನಿಟ್ರ್ಯಾಪ್ ಪ್ರಕರಣಕ್ಕೆ ಹೊಸ ತಿರುವು.

ಮುನಿರತ್ನ ಹನಿಟ್ರ್ಯಾಪ್ ಪ್ರಕರಣಕ್ಕೆ ಹೊಸ ತಿರುವು.

 ‘ಬಿ’ ರಿಪೋರ್ಟ್ ತಿರಸ್ಕರಿಸಿದ ನ್ಯಾಯಾಲಯ.

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಹನಿಟ್ರ್ಯಾಪ್‌ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಕರ್ನಾಟಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಿಐಡಿ ಎಸ್‌ಐಟಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ತಿರಸ್ಕರಿಸಿ, ಮರು ತನಿಖೆ ನಡೆಸುವಂತೆ ಆದೇಶಿಸಿದೆ. ಈ ಮೂಲಕ ಪ್ರಕರಣ ಮತ್ತೆ ಚುರುಕುಗೊಂಡಿದ್ದು, ಶಾಸಕರಿಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

ಮರು ತನಿಖೆಗೆ ಆದೇಶ

ಜೆಡಿಎಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಸಲ್ಲಿಸಿದ್ದ ದೂರಿನ ತನಿಖೆ ಪೂರ್ಣಗೊಳಿಸಿದ ಎಸ್‌ಐಟಿ ಅಧಿಕಾರಿಗಳು ಸಾಕ್ಷಿಯ ಅಭಾವವೆಂದು ಉಲ್ಲೇಖಿಸಿ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಆದರೆ, ಇದನ್ನು ಪ್ರಶ್ನಿಸಿ ನಾರಾಯಣಸ್ವಾಮಿ ಮರು ಅರ್ಜಿ ಸಲ್ಲಿಸಿದ್ದರು. ದೂರುದಾರರ ಪರ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ವಾದ ಮಂಡಿಸಿ, ಧ್ವನಿಮುದ್ರಣ ಸೇರಿದಂತೆ ಪ್ರಾಥಮಿಕ ಸಾಕ್ಷ್ಯಾಧಾರಗಳನ್ನು ಸಲ್ಲಿಸಲಾಗಿದೆ. ಆದರೂ ಪೊಲೀಸರು ಸಮರ್ಪಕ ತನಿಖೆ ನಡೆಸದೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ವಾದಗಳನ್ನು ಆಲಿಸಿ, ‘ಬಿ’ ರಿಪೋರ್ಟ್ ಅನ್ನು ರದ್ದುಗೊಳಿಸಿ, ಪ್ರಕರಣದ ಮುಂದಿನ ತನಿಖೆ ನಡೆಸುವಂತೆ ಸಿಐಡಿ ಎಸ್‌ಐಟಿಗೆ ನಿರ್ದೇಶನ ನೀಡಿದರು. ವಿಚಾರಣೆಯನ್ನು ಮಾರ್ಚ್ 30ಕ್ಕೆ ಮುಂದೂಡಲಾಗಿದೆ. ಈ ಆದೇಶದಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಏನಿದಿ ಹನಿಟ್ರ್ಯಾಪ್ ಕೇಸ್?

ಜೆಡಿಎಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಅವರು 2024ರ ಡಿಸೆಂಬರ್‌ನಲ್ಲಿ ನಂದಿನಿ ಲೇಔಟ್ ಠಾಣೆಗೆ ದೂರು ಸಲ್ಲಿಸಿದ್ದರು. ತಮ್ಮ ಹಾಗೂ ಪತ್ನಿ ಮಂಜುಳಾ ಅವರ ವಿರುದ್ಧ ಹನಿಟ್ರ್ಯಾಪ್ ಸಂಚು ರೂಪಿಸಿ, ತೇಜೋವಧೆ ಮಾಡಲು ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ, ಪತ್ನಿಯ ಕೊಲೆಗೆ ಷಡ್ಯಂತ್ರ ರೂಪಿಸಿ ಸುಪಾರಿ ನೀಡಲಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದರು. ಈ ಪ್ರಕರಣದ ತನಿಖೆಯನ್ನು ನಂತರ ಸಿಐಡಿ ಎಸ್‌ಐಟಿಗೆ ವರ್ಗಾವಣೆ ಮಾಡಲಾಗಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *