MG ರಸ್ತೆ ಡಾಂಬರೀಕರಣ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ.

MG ರಸ್ತೆ ಡಾಂಬರೀಕರಣ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ.

ಬದಲಿ ರಸ್ತೆ ಮಾರ್ಗಗಳ ವಿವರಗಳೊಂದಿಗೆ 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

ಬೆಂಗಳೂರು: ಬಹುಕಾಲದ ನಿರೀಕ್ಷೆಯಾಗಿರುವ ಎಂ.ಜಿ. ರಸ್ತೆಯ ಮರು ಡಾಂಬರೀಕರಣ ಕಾಮಗಾರಿಯನ್ನು ಗುರುವಾರದಿಂದ ಆರಂಭಿಸಲು ಬೆಂಗಳೂರು ಸೆಂಟ್ರಲ್​​ ಸಿಟಿ ಕಾರ್ಪೊರೇಷನ್​​ ಸಜ್ಜಾಗಿದೆ. ಮೊದಲ ಹಂತದಲ್ಲಿ ಟ್ರಿನಿಟಿ ಸರ್ಕಲ್‌ನಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವೃತ್ತದವರೆಗೆ 2.2 ಕಿಮೀ ಉದ್ದದ ರಸ್ತೆಯ ಮರು ಡಾಂಬರೀಕರಣ ನಡೆಯಲಿದೆ.  ಮಾಹಿತಿಯ ಪ್ರಕಾರ, ಮಾರ್ಚ್ 4ರ ಸಂಜೆ (ಇಂದು) ಪೂರ್ವಸಿದ್ಧತಾ ಕಾಮಗಾರಿಗಳು ಆರಂಭವಾಗಲಿವೆ. ಟ್ರಾಫಿಕ್ ಪೊಲೀಸ್ ಅನುಮತಿ ಬಾಕಿ ಇರುವುದರಿಂದ ಸ್ವಲ್ಪ ವಿಳಂಬ ಸಾಧ್ಯತೆ ಇದೆ. ಹೀಗಿದ್ದರೂ 15 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ ಎನ್ನಲಾಗಿದೆ.

ಎಂ.ಜಿ. ರಸ್ತೆಗೆ ಮೊದಲು ವೈಟ್ ಟಾಪಿಂಗ್ ಮಾಡುವ ಬಗ್ಗೆ ಜಿಬಿಎ ಚಿಂತನೆ ನಡೆಸಿತ್ತು. ಆದರೆ ಈ ಕೆಲಸಗಳಿಗಾಗಿ ದೀರ್ಘಕಾಲ ರಸ್ತೆ ಬಂದ್ ಮಾಡಬೇಕಾದ ಅನಿವಾರ್ಯತೆ ಎದುರಾಗಲಿರುವ ಕಾರಣ ಟ್ರಾಫಿಕ್ ಪೊಲೀಸರು ಇದಕ್ಕೆ ಅನುಮತಿ ನಿರಾಕರಿಸಿದ್ದರು.  ಮರು ಡಾಂಬರೀಕರಣ ಕಾಮಗಾರಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ಮೀಸಲಾದ 25 ಕೋಟಿ ಮೊತ್ತದಲ್ಲಿ ನಡೆದಿದೆ. ಈ ಮೊತ್ತದಲ್ಲಿ ಎಂ.ಜಿ. ರೋಡ್​​ ಸೇರಿದಂತೆ ಏಳು ಪ್ರಮುಖ ರಸ್ತೆಗಳ ಮರು ಡಾಂಬರೀಕರಣಕ್ಕೆ ಯೋಜಿಸಲಾಗಿದೆ.

ಬೆಂಗಳೂರು ವಿವಿ ರಸ್ತೆಯೂ ತಾತ್ಕಾಲಿಕವಾಗಿ ಕ್ಲೋಸ್​​

ರೈಲ್ವೆ ಸೇತುವೆಯ ಸ್ಟೀಲ್ ಗರ್ಡರ್ ಬದಲಾವಣೆ ಕಾಮಗಾರಿಯ ಹಿನ್ನೆಲೆ ಮೈಸೂರು ರಸ್ತೆಯಿಂದ ಜ್ಞಾನಭಾರತಿ ಕ್ಯಾಂಪಸ್ ಕಡೆಗೆ ಸಾಗುವ ಬೆಂಗಳೂರು ವಿಶ್ವವಿದ್ಯಾಲಯ ರಸ್ತೆ ಕ್ಲೋಸ್​​ ಆಗಲಿದೆ. ಬುಧವಾರ ಸಂಜೆ 6ರಿಂದ ಶುಕ್ರವಾರ ಮಧ್ಯಾಹ್ನ 12 ಗಂಟೆವರೆಗೆ ರಸ್ತೆ ಬಂದ್ ಇರಲಿದೆ ಎಂದು ಟ್ರಾಫಿಕ್​​ ಪೊಲೀಸರು ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *