ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಬೇಕಿತ್ತು.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಹಠಾತ್ತನೆ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ಹೇಳಿಕೆ ಬಿಡುಗಡೆ ಮಾಡಿದೆ. ಆದರೆ ಉತ್ತರ ಭಾರತದ ಕೆಲವು ಇನ್ಸ್ಟಾಗ್ರಾಂ ಸಿನಿಮಾ ವಿಮರ್ಶಕರು, ಕೆಲ ಮಾಧ್ಯಮಗಳು, ‘ಧುರಂಧರ್ 2’ ಸಿನಿಮಾಕ್ಕೆ ಹೆದರಿ ಸಿನಿಮಾ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಸಹ ಹೇಳುತ್ತಿದ್ದಾರೆ. ಆದರೆ ಕೆಲ ಮೂಲಗಳ ಪ್ರಕಾರ, ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಬೇಕೆಂಬ ಒತ್ತಡ ಯಶ್ ಹಾಗೂ ಸಿನಿಮಾದ ನಿರ್ಮಾಪಕರ ಮೇಲಿತ್ತು ಎನ್ನಲಾಗುತ್ತಿದೆ.
‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡುವಂತೆ ಯಶ್ ಹಾಗೂ ನಿರ್ಮಾಪಕ ವೆಂಕಟ್ ಮೇಲೆ ಒತ್ತಡ ಇತ್ತು ಎನ್ನಲಾಗುತ್ತಿದೆ. ಈ ಒತ್ತಡ ‘ಧುರಂಧರ್ 2’ ಕಡೆಯಿಂದ ಅಲ್ಲ ಬದಲಿಗೆ ‘ಟಾಕ್ಸಿಕ್’ ಸಿನಿಮಾದ ವಿತರಣೆ ಹಕ್ಕು ಪಡೆದಿದ್ದ ವಿತರಕರುಗಳಿಂದ. ಅದರಲ್ಲೂ ವಿಶೇಷವಾಗಿ ‘ಟಾಕ್ಸಿಕ್’ ಸಿನಿಮಾದ ಉತ್ತರ ಭಾರತ ವಿತರಣೆ ಹಕ್ಕು ಪಡೆದವರು ಹಾಗೂ ವಿದೇಶ ವಿತರಣೆ ಹಕ್ಕು ಪಡೆದವರ ಸತತ ಒತ್ತಡದಿಂದಾಗಿ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯನ್ನು ಒಲ್ಲದ ಮನಸ್ಸಿನಿಂದ ಮುಂದೂಡಲಾಯ್ತು ಎನ್ನಲಾಗುತ್ತಿದೆ.
‘ಧುರಂಧರ್ 2’ ಸಿನಿಮಾವನ್ನು ದಕ್ಷಿಣದಲ್ಲಿ ಎದುರಿಸುವುದು ‘ಟಾಕ್ಸಿಕ್’ಗೆ ಕಷ್ಟವೇನೂ ಆಗುತ್ತಿರಲಿಲ್ಲ, ಆದರೆ ಉತ್ತರ ಭಾರತದ ಹಾಗೂ ವಿದೇಶದಲ್ಲಿ ‘ಧುರಂಧರ್ 2’ ಜೊತೆಗೆ ಸ್ಪಷ್ಟ ಸ್ಪರ್ಧೆ ಇತ್ತು. ಈ ಸ್ಪರ್ಧೆಯಿಂದ ಎರಡೂ ಸಿನಿಮಾಗಳಿಗೂ ಸಮಾನ ನಷ್ಟ ಆಗುತ್ತಿತ್ತು. ಆದರೆ ‘ಧುರಂಧರ್’ ಸಿನಿಮಾ ಈಗಾಗಲೇ 1300 ಕೋಟಿಗೂ ಹೆಚ್ಚು ಬಾಚಿಕೊಂಡಿದ್ದು, ‘ಧುರಂಧರ್ 2’ ಫ್ಲಾಪ್ ಆದರೂ ಅವರಿಗೆ ನಷ್ಟವಿಲ್ಲ. ಆದರೆ ‘ಟಾಕ್ಸಿಕ್’ಗೆ ಹಾಗಾಗದು. ಹಾಗಾಗಿ ಅನವಶ್ಯಕ ಸ್ಪರ್ಧೆಗೆ ಹೋಗಿ ಲಾಭ ಕಡಿಮೆ ಮಾಡಿಕೊಳ್ಳುವುದಕ್ಕಿಂತಲೂ ತುಸು ಪಕ್ಕಕ್ಕೆ ಸರಿದು ಆ ಬಳಿಕ ಒಳ್ಳೆಯ ಲಾಭ ಮಾಡಿಕೊಳ್ಳುವುದು ಜಾಣತನ ಎಂದು ‘ಟಾಕ್ಸಿಕ್’ ತಂಡ ನಿರ್ಧರಿಸಿದಂತಿದೆ.
For More Updates Join our WhatsApp Group :



